ಮೊದಲ ಮುಂಗಾರು ಮಳೆಗೆ ಪಶ್ಚಿಮಘಟ್ಟ ನಳನಳಿಸುತ್ತಿದೆ. ಚಾರ್ಮಾಡಿ ಘಾಟ್ ಸೌಂದರ್ಯ ಇಮ್ಮಡಿಸಿದೆ. ಮುಗಿಲಲ್ಲಿ ಮಂಜಿನಾಟವಿದ್ದರೆ, ಹಸಿರು ಹೊದ್ದ ಬೆಟ್ಟಗಳಲ್ಲಿ ಜಲಧಾರೆ ಕಣ್ಮನ ಸೆಳೆಯುತ್ತವೆ. ನೋಡುವ ಕಣ್ಣುಗಳಿಗೆ ಪರಮಾನಂದ ವಾಗುತ್ತದೆ.
ದಟ್ಟ ಮಂಜಿನ ನಡುವೆ ದಾರಿಯುದ್ದಕ್ಕೂ ಸಿಗುವ ಜಲಧಾರೆಗಳು, ಆಕಾಶ-ಭೂಮಿ ಒಂದಾದಂತೆ ಕಾಣುವ ದೃಶ್ಯಗಳು ಪ್ರಕೃತಿಯ ಮಡಿಲಲ್ಲಿ ರೆಕ್ಕೆಬಿಚ್ಚಿ ಹಾರಾಡುವಂತೆ ಮಾಡುತ್ತವೆ. ಅಂದ ಹಾಗೆ, ಮಳೆಗಾಲದಲ್ಲಿ ಜಲಪಾತಗಳು ಜೀವಂತಿಕೆ ಪಡೆದುಕೊಳ್ಳುತ್ತವೆ. ಇಂತಹ ಜಲಪಾತಗಳನ್ನು ಕಣ್ಣು ತುಂಬಿಕೊಳ್ಳುವುದೇ ಮುದ ನೀಡುತ್ತದೆ.
ಚಾರ್ಮಾಡಿ ಘಾಟ್ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ತಾಣವಾಗಿದೆ. ಅಪಾರ ಸಂಖ್ಯೆಯ ಪ್ರವಾಸಿಗರು ಚಾರ್ಮಾಡಿ ಘಾಟ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬರುತ್ತಾರೆ. ಈಗ ಮುಂಗಾರು ಮಳೆ ಆರಂಭವಾಗಿ ಮೊದಲ ಮಳೆಗೆ ಚಾರ್ಮುಡಿ ಘಾಟ್ ಸೌಂದರ್ಯ ಜಾಸ್ತಿಯಾಗಿದೆ. ಪಶ್ಚಿಮ ಘಟ್ಟದ ದಟ್ಟ ಕಾನನದಲ್ಲಿ ಮಳೆಯಿಂದಾಗಿ ನೂರಾರು ಜಲಪಾತಗಳಿಗೆ ಜೀವಕಳೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಸೊಬಗು ಪದಗಳಿಗೆ ನಿಲುಕುವುದಿಲ್ಲ. ಮಂಜಿನ ರಾಶಿಯನ್ನೇ ಗುಡ್ಡೆ ಹಾಕಿದಂತೆ ಕಾಣುವ ಅಪರೂಪದ ದೃಶ್ಯಗಳನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ. ಇಲ್ಲಿನ ಜಲ ದಾರೆಯನ್ನು ಕಂಡು ಖುಷಿಪಡಬಹುದು ಮಂಜು ನೀರು ಹಸಿರ ನಡುವೆ ಫೋಟೋ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಬಹುದು.