ಚಿಕ್ಕಮಗಳೂರು: ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಅಬ್ಬರ ಮುಂದುವರೆದಿದ್ದು, ಚಾರ್ಮಡಿ ಘಾಟ್ ನಲ್ಲಿ ಮತ್ತೆ ಭೂ ಕುಸಿತ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಚಾರ್ಮಡಿ ಘಾಟ್ ನಲ್ಲಿ ಇಂದು ಮತ್ತೆ ಗುಡ್ಡ ಕುಸಿತವುಂಟಾಗಿದ್ದು, ರಸ್ತೆಗೆ ಅಡ್ಡಲಾಗಿ ಬೃಹತ್ ಮರಗಳು, ಮಣ್ಣು, ಕಲ್ಲುಗಳು ಬಿದ್ದಿವೆ. ಇದರಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಚಿಕ್ಕಮಗಳೂರು-ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಚಾರ್ಮಡಿ ಘಾಟ್ ನಲ್ಲಿ ಈ ಘಟನೆ ನಡೆದಿದ್ದು, ವಾಹನ ಸಂಚಾರ ಸಾಧ್ಯವಾಗದೇ ಟ್ರಾಫಿಕ್ ಜಾಮ್ ಸಂಭವಿಸಿದೆ. ನೂರಾರು ವಾಹನಗಳು ರಸ್ತೆಯಲ್ಲಿ ಸಾಲು ಸಾಲಾಗಿ ನಿಂತಿವೆ.
ಕೊಟ್ಟಿಗೆಹಾರ, ಬೆಳ್ತಂಗಡಿ ಬಳಿ ವಾಹನ ಸಂಚಾರ ಬಂದ್ ಮಾಡಲಾಗಿದ್ದು, ಚಾರ್ಮಡಿ ಘಾಟ್ ಗೆ ತೆರಳದಂತೆ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ.