ಮಳೆಗಾಲದಲ್ಲಿ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಸ್ಥಳಗಳಲ್ಲಿ ಚಾರ್ಮಾಡಿ ಘಾಟ್ ಕೂಡ ಒಂದಾಗಿದೆ. ಮಲೆನಾಡಿನ ಚಿಕ್ಕಪುಟ್ಟ ಜಲಪಾತಗಳೆಲ್ಲಾ ಜೀವಂತಿಕೆ ಪಡೆದುಕೊಳ್ಳುವ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬವಿದ್ದಂತೆ.
ಜಲಧಾರೆ, ಹಸಿರನ್ನೇ ಮೈವೆತ್ತು ನಿಂತ ಬೆಟ್ಟಗಳು, ಕಡಿದಾದ ಕಣಿವೆಯ ದಾರಿ, ಜಲಪಾತ, ಪ್ರಪಾತ, ಹಸಿರು, ಮಳೆ, ಗುಡ್ಡವನ್ನು ಚುಂಬಿಸುವ ಬೆಳ್ಳಿ ಮೋಡಗಳು ಒಂದೇ, ಎರಡೇ. ಹೀಗೆ ಚಾರ್ಮಾಡಿ ಘಾಟ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಾರೆ. ಅಲ್ಲಲ್ಲಿ ಕಾಣಸಿಗುವ ಜಲಪಾತಗಳ ಸೌಂದರ್ಯಕ್ಕೆ ಮಾರು ಹೋಗುತ್ತಾರೆ. ಭೂಮಿ, ಭಾನು, ವರುಣ ಮೂರೂ ಒಂದಾಗಿ ಪ್ರಕೃತಿ ಸೌಂದರ್ಯವನ್ನು ಇಮ್ಮಡಿಗೊಳಿಸುವ ದೃಶ್ಯವನ್ನು ಒಮ್ಮೆ ನೋಡಬನ್ನಿ.
ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್ ಸೌಂದರ್ಯ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ. ಮಳೆಗಾಲದಲ್ಲಿ ಇಳೆಯ ದೃಶ್ಯವನ್ನು ನೋಡಿಯೇ ಸವಿಯಬೇಕು. ಯುಗಾದಿಯಲ್ಲಿ ಗೋಡೆ ಚೆಂದ, ಮಳೆಗಾಲದಲ್ಲಿ ಭೂಮಿ ಚೆಂದ ಎಂಬ ಮಾತು ಪ್ರಚಲಿತದಲ್ಲಿದೆ.
ಬೇಸಿಗೆಯಲ್ಲಿ ಬರುವ ಯುಗಾದಿಯಲ್ಲಿ ಗೋಡೆಗಳಿಗೆ ಸುಣ್ಣ, ಬಣ್ಣ ಬಳಿಯುವುದರಿಂದ ಅಂದವಾಗಿ ಕಾಣುತ್ತದೆ. ಅದೇ ರೀತಿ ಮಳೆಗಾಲದಲ್ಲಿ ಪ್ರಕೃತಿಯ ಸೌಂದರ್ಯ ಹೆಚ್ಚುತ್ತದೆ. ಅಂತಹ ಸೌದರ್ಯವನ್ನೊಮ್ಮೆ ನೀವು ಕಣ್ತುಂಬಿಕೊಳ್ಳಲು ಚಾರ್ಮಾಡಿ ಘಾಟ್ ಗೆ ಹೋಗಿ ಬನ್ನಿ.