ಚಿಕ್ಕಮಗಳೂರು: ರಾಜ್ಯದ ಮಲೆನಾಡು, ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವ ಚಾರ್ಮಾಡಿ ಘಾಟ್ ನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜನಜೀವನ ಅಷ್ಟವ್ಯಸ್ತಗೊಂಡಿದೆ. ಅತಿಯಾದ ಮಳೆಯ ಕಾರಣ ಸಂಪಾಚೆ ಘಾಟ್, ಶಿರಾಡಿ ಘಾಟ್ ಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಚಾರ್ಮಾಡಿ ಘಾಟ್ ಮೇಲೆ ಹೆಚ್ಚಿನ ಸಂಚಾರ ಒತ್ತಡ ಇರುವುದರಿಂದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಜಿಲ್ಲಾಧಿಕಾರಿ ಆದೇಶಿಸಿದ್ದು, ಚಾರ್ಮಾಡಿ ಘಾಟ್ ನಲ್ಲಿ ಭಾರಿ ವಾಹನಗಳು, ಐಷಾರಾಮಿ ಬಸ್ ಗಳು ಹಾಗೂ ಹೆಚ್ಚಿನ ಭಾರ ಇರುವ ವಾಹನಗಳ ಸಂಚಾರ ನಿಷೇಧಿಸಲಾಗಿದೆ.