ಕುಖ್ಯಾತ ಸರಣಿ ಹಂತಕ, ಕಳೆದ 10 ವರ್ಷಗಳಲ್ಲಿ ಹಲವಾರು ಯುವ ವಿದೇಶಿಗರನ್ನು ಹತ್ಯೆಗೈದಿದ್ದ ಪಾತಕಿ ಚಾರ್ಲ್ಸ್ ಶೋಭರಾಜ್ ಶುಕ್ರವಾರ (ಡಿಸೆಂಬರ್ 23) ಬಿಡುಗಡೆಗೊಂಡಿದ್ದಾನೆ. ಕಳೆದ 20 ವರ್ಷಗಳಿಂದ ನೇಪಾಳ ಜೈಲಿನಲ್ಲಿದ್ದ ಈತ ಈಗ ಬಿಡುಗಡೆಗೊಂಡಿದ್ದಾನೆ.
ಈತನಿಗೆ ಈಗ 79ವರ್ಷ ವಯಸ್ಸು. ವಯಸ್ಸನ್ನು ಪರಿಗಣಿಸಿ ನೇಪಾಳದ ಕೋರ್ಟ್ ಬಿಡುಗಡೆ ಮಾಡಿದೆ. 15 ದಿನಗಳಲ್ಲಿ ಶೋಭರಾಜ್ ನನ್ನು ನೇಪಾಳದಿಂದ ಫ್ರಾನ್ಸ್ಗೆ ಗಡಿಪಾರು ಮಾಡಬೇಕು ಎಂದು ನೇಪಾಳ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಈತನ ವಿಮಾನದ ಟಿಕೆಟ್ ಅನ್ನು ಕಾಯ್ದಿರಿಸಲಾಗಿದೆ ಎಂದು ಶೋಭರಾಜ್ ವಕೀಲ ಕೋರ್ಟ್ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 6ಗಂಟೆಗೆ ಕತಾರ್ ಏರ್ ವೇಸ್ ವಿಮಾನದಲ್ಲಿ ಚಾರ್ಲ್ಸ್ ಶೋಭರಾಜ್ ಫ್ರಾನ್ಸ್ಗೆ ತೆರಳಿದ್ದಾನೆ ಎನ್ನಲಾಗಿದೆ.
ಶೋಭರಾಜ್ ಪೋಷಕರು ಭಾರತ ಮತ್ತು ವಿಯೆಟ್ನಾಂಗೆ ಸೇರಿದವರು. 2003ರಂದು ಚಾರ್ಲ್ಸ್ ನೇಪಾಳದ ಕ್ಯಾಸಿನೋ ಎದುರು ಪತ್ತೆಯಾಗಿದ್ದು, ಎರಡು ಪ್ರಕರಣಗಳಲ್ಲಿ ವಾಂಟೆಡ್ ಆಗಿದ್ದ ಈತನನ್ನು ಬಂಧಿಸಲಾಗಿತ್ತು.
ಈತ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ. ಅದರಲ್ಲಿ ಆತ, 2003 ರಲ್ಲಿ ನೇಪಾಳದ ಕ್ಯಾಸಿನೊದಿಂದ ಬಂಧನಕ್ಕೊಳಗಾಗಿರುವ ಬಗ್ಗೆ ಹೇಳಿದ್ದಾನೆ.
1976 ಮತ್ತು 1997 ರ ನಡುವೆ ದೆಹಲಿಯ ತಿಹಾರ್ ಜೈಲಿನಲ್ಲಿ ಇದ್ದ ದಿನಗಳು ಹಾಗೂ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ನೊಂದಿಗಿನ ಸಭೆಗಳ ಬಗ್ಗೆ ತಿಳಿಸಿದ್ದಾನೆ. ಆಗಿನ ವಿದೇಶಾಂಗ ಸಚಿವರಾಗಿದ್ದ ದಿವಂಗತ ಜಸ್ವಂತ್ ಸಿಂಗ್ ಮತ್ತು ಅಂತಿಮವಾಗಿ ಭಯೋತ್ಪಾದಕರನ್ನು ಕಂದಹಾರ್‌ಗೆ ಕರೆದೊಯ್ದ ವ್ಯಕ್ತಿಯೊಂದಿಗೆ “ದೀರ್ಘ ಸಂಭಾಷಣೆ” ಕುರಿತು ಮಾತನಾಡಿದ್ದಾನೆ. ನಾನು ಬಿಡುಗಡೆಗೊಂಡ ಮೇಲೆ ನೇರವಾಗಿ ಫ್ರಾನ್ಸ್ನಲ್ಲಿರುವ ನನ್ನ ಮನೆಗೆ ಹೋಗುತ್ತೇನೆ. ಇನ್ನೂ ಹಲವು ವರ್ಷ ಬದುಕುವುದಿದೆ ಎಂದಿದ್ದಾನೆ.