ಪೆಟ್ರೋಲ್ ಹಾಗೂ ಡೀಸೆಲ್ ದುಬಾರಿಯಾಗಿರುವ ಇಂದಿನ ದಿನಮಾನಗಳಲ್ಲಿ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಎಲೆಕ್ಟ್ರಿಕ್ ವಾಹನ ಖರೀದಿಸಿದರೆ ಒಂದೊಮ್ಮೆ ಚಾರ್ಜ್ ಖಾಲಿಯಾದರೆ ಚಾರ್ಜಿಂಗ್ ಪಾಯಿಂಟ್ ಹುಡುಕೋದೇ ದೊಡ್ಡ ಸಮಸ್ಯೆ ಎಂಬುದು ಇವಿ ಹೊಂದಿರುವವರ ಚಿಂತೆ.
ಆದರೆ, ಬ್ಯೂರೋ ಆಫ್ ಎನರ್ಜಿ ಎಫಿಶಿಯನ್ಸಿ ವರದಿ ಪ್ರಕಟಿಸಿದ್ದು, ಇದರ ಪ್ರಕಾರ ರಾಜ್ಯದಲ್ಲಿ 5,765 ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳಿವೆ ಎಂದು ತಿಳಿಸಿದೆ. ಈ ಮೂಲಕ ದೇಶದಲ್ಲಿ ಕರ್ನಾಟಕ ಅತಿ ಹೆಚ್ಚು ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ‘ನಂಬರ್ ಒನ್’ ಸ್ಥಾನ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಇಂಧನ ಸಚಿವ ಕೆ.ಜೆ. ಜಾರ್ಜ್, ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದ ಬದ್ಧತೆಯನ್ನು ಈ ಸಾಧನೆ ಎತ್ತಿ ತೋರಿಸುತ್ತದೆ. ಜೊತೆಗೆ ರಾಜ್ಯದ ಇವಿ ನೀತಿಯು ಇವಿ ಬಳಕೆದಾರರು, ವಾಹನ ಉತ್ಪಾದಕರಿಗೆ ಪೂರಕವಾಗಿದೆ ಎಂದು ತಿಳಿಸಿದ್ದಾರೆ.