ಬೆಂಗಳೂರು: ಕೊರೋನಾ ಕಾರಣದಿಂದ ಮಾನಸ ಸರೋವರ ಮತ್ತು ಚಾರ್ ಧಾಮ್ ಯಾತ್ರೆಗೆ ತೆರಳುವವರಿಗೆ ಅನುದಾನ ಸ್ಥಗಿತಗೊಳಿಸಲಾಗಿದೆ.
ಉತ್ತರಾಖಂಡ್ ದಲ್ಲಿರುವ ಕೇದಾರನಾಥ, ಬದರಿನಾಥ, ಗಂಗೋತ್ರಿ ಯಮುನೋತ್ರಿ ದರ್ಶನಮಾಡಿ ಬರುವ ಯಾತ್ರಾರ್ಥಿಗಳಿಗೆ ಚಾರ್ ಧಾಮ್ ಯೋಜನೆಯಡಿ ಸಹಾಯಧನ ನೀಡಲಾಗುತ್ತದೆ.
ಚಾರ್ ಧಾಮ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಈ ವರ್ಷ ಸರ್ಕಾರದ ಸಹಾಯಧನ ನೀಡಲಾಗುವುದಿಲ್ಲ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ 20 ಕೋಟಿ ರೂ. ಅನುದಾನ ಘೋಷಿಸಲಾಗಿತ್ತು. ಕೊರೋನಾ ಕಾರಣದಿಂದ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದಾಗಿ ಸಾವಿರಾರು ಜನ ಪುಣ್ಯ ಯಾತ್ರೆಯಿಂದ ವಂಚಿತರಾಗುವಂತಾಗಿದೆ ಎಂದು ಹೇಳಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಗೆ ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆಯಾಗಿಲ್ಲ. ಸಾರ್ವಜನಿಕರಿಂದ ಕೂಡ ಅರ್ಜಿ ಸಲ್ಲಿಕೆಯಾಗಿಲ್ಲ. ಏಪ್ರಿಲ್-ಮೇ ತಿಂಗಳಿನಲ್ಲಿ ಚಾರ್ ಧಾಮ್, ಮಾನಸ ಸರೋವರ ಯಾತ್ರೆ ಆರಂಭವಾಗಿ ಅಕ್ಟೋಬರ್ ನವೆಂಬರ್ ವೇಳೆಗೆ ಮುಗಿಯುತ್ತಿತ್ತು. ನವೆಂಬರ್ 30 ರೊಳಗೆ ಯಾತ್ರೆಗೆ ಹೋಗಿ ಬಂದವರು ಅರ್ಜಿ ಸಲ್ಲಿಸಿ ಸಹಾಯಧನ ಪಡೆದುಕೊಳ್ಳುತ್ತಿದ್ದರು. ಈ ವರ್ಷ ಸಹಾಯಧನ ಬಿಡುಗಡೆಯಾಗಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಧೀನಕ್ಕೆ ಒಳಪಟ್ಟ ಸಂಸ್ಥೆಗಳ ಮೂಲಕ ಯಾತ್ರೆ ಕೈಗೊಂಡು ಯಾತ್ರಾರ್ಥಿಗಳು ದೃಢೀಕೃತ ಪ್ರಮಾಣಪತ್ರ ಪಡೆದು ಸಹಾಯಧನಕ್ಕೆ ಅರ್ಜಿ ಸಲ್ಲಿಸಬೇಕಿದೆ. ಯಾತ್ರೆ ಮುಗಿದ 4 ತಿಂಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಪ್ರೋತ್ಸಾಹಧನ ಬಿಡುಗಡೆಯಾಗುತ್ತದೆ. ಆದರೆ, ಈ ಬಾರಿ ಕೊರೋನಾ ಕಾರಣದಿಂದ ಯಾರು ಅರ್ಜಿ ಸಲ್ಲಿಸಿಲ್ಲ, ಅನುದಾನ ನೀಡಿಲ್ಲವೆಂದು ಹೇಳಲಾಗಿದೆ. ಅಲ್ಲದೇ, ಕಳೆದ ಸಾಲಿನ ಯಾತ್ರಾರ್ಥಿಗಳಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಹಾಯಧನ ನೀಡಿಲ್ಲವೆನ್ನಲಾಗಿದೆ.