ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಇಂದು ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುವ ಬಗ್ಗೆ ಪ್ರಧಾನಿಯವರೊಂದಿಗೆ ಚರ್ಚಿಸಿದ್ದೇನೆ. ರೈತರು ವಿರೋಧಿಸುತ್ತಿರುವ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿದ್ದೇನೆ. ಪ್ರತಿಭಟನಾ ನಿರತ ರೈತರೊಂದಿಗೆ ಸರ್ಕಾರ ಚರ್ಚೆ ನಡೆಸಬೇಕು ಎಂದರು.
ಭಾರತ-ಪಾಕಿಸ್ತಾನ ಕರ್ತಾರ್‌ಪುರ್ ಕಾರಿಡಾರ್ ಓಪನ್ ಮಾಡುವಂತೆ ಮನವಿ ಮಾಡಿದ್ದೇನೆ. ಕೊರೋನಾ ಹಿನ್ನೆಲೆಯಲ್ಲಿ ಕಾರಿಡಾರ್ ಮುಚ್ಚಲಾಗಿದ್ದು, ಇದನ್ನು ತೆರೆಯಬೇಕು ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಇದು ಸೌಜನ್ಯದ ಭೇಟಿಯಾಗಿದ್ದು, ನಾನು ಅವರೊಂದಿಗೆ 3 ಸಮಸ್ಯೆಗಳನ್ನು ಹಂಚಿಕೊಂಡಿದ್ದೇನೆ. ಮೊದಲನೆಯದಾಗಿ, ಸಾಮಾನ್ಯವಾಗಿ ಪಂಜಾಬ್‌ನಲ್ಲಿ ಅಕ್ಟೋಬರ್ 1 ರಂದು ಖರೀದಿ ಸೀಸನ್ ಆರಂಭವಾಗುತ್ತದೆ. ಆದರೆ, ಈ ವರ್ಷ 10 ನೇ ತಾರೀಖಿನಂದು ಆರಂಭಿಸಲು ಕೇಂದ್ರ ನಿರ್ಧರಿಸಿದೆ. ಈಗಲೇ ಖರೀದಿ ಆರಂಭಿಸಲು ವಿನಂತಿಸಿದ್ದೇನೆ. ಪ್ರತಿಭಟನಾ ನಿರತ ರೈತರೊಂದಿಗೆ ಚರ್ಚೆ ಪುನರಾರಂಭಿಸುವಂತೆ ಮನವಿ ಮಾಡಿದ್ದು, ಮೂರು ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದೇನೆ ಎಂದರು.