ಚಾರಣ ಅಥವಾ ಟ್ರಕ್ಕಿಂಗ್ ಅನ್ನು ಬಹೇತಕ ಯುವಜನತೆ ಇಷ್ಟಪಡುತ್ತಾರೆ. ಇದೊಂದು ಹವ್ಯಾಸವಾಗಿದ್ದು, ಕೆಲವರು ಕಾಂಕ್ರೀಟ್ ಕಾಡಿನಿಂದ ಬೇಸತ್ತು ಬೆಟ್ಟ ಬತ್ತುವ ಹವ್ಯಾಸ ಇರುವಂಥವರು ಆಗಾಗ್ಗೆ ತಮ್ಮ ಸ್ನೇಹಿತರ ಜೊತೆ ಟ್ರಕ್ಕಿಂಗ್ ತೆರಳುತ್ತಾರೆ. ಪ್ರಕೃತಿಯ ಚೆಲುವನ್ನು ಅನುಭವಿಸುವ ಅವಕಾಶ ಇದರಲ್ಲಿ ಸಿಗುತ್ತದೆ.
ನೀವು ಚಾರಣ ಶುರು ಮಾಡಬೇಕು ಅಂತಿದ್ದರೆ, ಅದಕ್ಕಿಂತ ಮುಂಚೆ ಸಾಕಷ್ಟು ತಯಾರಿ ನಡೆಸಬೇಕಿರುವುದು ಅತಿ ಮುಖ್ಯ. ತಮಗೆ ಬೇಕಾದ ಆಹಾರ ಪದಾರ್ಥ, ಬಟ್ಟೆ, ಮಲಗಲು ಬೇಕಾದ ಸಂರಜಾಮು, ನೀರು ಇತ್ಯಾದಿ ಅತಿ ಮುಖ್ಯವಾದವುಗಳನ್ನು ಕೊಂಡೊಯ್ಯಬೇಕು. ಇನ್ನು ಚಾರಣಕ್ಕೆ ಸುಂದರ ತಾಣ ಯಾವುದೆಂದು ನೋಡಿ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕು.
ನಮ್ಮ ರಾಜ್ಯದ ಪಶ್ಚಿಮಘಟ್ಟಗಳಿಂದ ಆವೃತವಾಗಿರುವ ಕುಮಾರಪರ್ವತ ಸುಂದರ ಚಾರಣ ಪ್ರದೇಶವಾಗಿದೆ. ಬೆಟ್ಟದ ತಪ್ಪಲಿನಲ್ಲಿ ಪ್ರಾಚೀನ ಮತ್ತು ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯವಿದೆ. ಈ ದೇವಾಲಯವು ತನ್ನದೇ ಆದ ಇತಿಹಾಸ ಹೊಂದಿದೆ. ದೇಶದಾದ್ಯಂತ ವಿಶೇಷವಾಗಿ ದಕ್ಷಿಣ ಭಾರತದ ಜನರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿ ನಾಗಪೂಜೆ ಮಾಡುತ್ತಾರೆ. ಈ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂದೆ ಇರುವುದೇ ಕುಮಾರಪರ್ವತ ಶಿಖರ. ಇದನ್ನು ಶೇಷ ಪರ್ವತ ಅಂತಾನೂ ಕರೆಯುತ್ತಾರೆ.
ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯಯದ ಹಚ್ಚ ಹಸಿರಿನ ಕಾಡಿನ ದಟ್ಟವಾದ ಹೊದಿಕೆಯಿಂದ ಶೇಷ ಪರ್ವತವು ಎತ್ತರವಾಗಿ ನಿಂತಿದೆ. ಕುಮಾರಪರ್ವತ ಚಾರಣ ಅಂತಲೇ ಈ ಶಿಖರ ಜನಪ್ರಿಯವಾಗಿದೆ. ಈ ಶಿಖರವು ಕೊಡಗಿನ ಎರಡನೇ ಅತಿ ಎತ್ತರದ ಶಿಖರವಾಗಿದ್ದು, ತಡಿಯಂಡಮೋಳ್ ನಂತರ ಕರ್ನಾಟಕದ ನಾಲ್ಕನೇ ಅತಿ ಎತ್ತರದ ಶಿಖರವಾಗಿದೆ.
ಸುಮಾರು 1,700 ಮೀ (ಅಂದಾಜು 5,600 ಅಡಿ) ತುಸು ಹೆಚ್ಚೇ ಎತ್ತರವಿರುವ ಶೇಷ ಪರ್ವತವು ಅತ್ಯಂತ ಸವಾಲಿನ ಚಾರಣ ಅಂತಲೂ ಕರೆಯಲ್ಪಟ್ಟಿದೆ. ಚಾರಣವು 22 ಕಿ.ಮೀ ದೂರವಿದ್ದು, ಸಾಮಾನ್ಯವಾಗಿ ಎರಡು ದಿನಗಳಲ್ಲಿ ಪೂರ್ಣಗೊಳಿಸಬಹುದಾಗಿದೆ.
ಕುಮಾರಪರ್ವತಕ್ಕೆ ಟ್ರಕ್ಕಿಂಗ್ ಹೊರಡುವುದೆಂದರೆ ಚಾರಣಿಗರು ಬಹಳ ಇಷ್ಟಪಡುತ್ತಾರೆ. ಒಂದೆಡೆ ಹಸಿರು ಸೀರೆಯುಟ್ಟು ಕಂಗೊಳಿಸುತ್ತಿರುವ ಬೆಟ್ಟ-ಗುಡ್ಡಗಳು, ಇನ್ನೊಂದೆಡೆ ಮುಳಿ ಹುಲ್ಲಿನಿಂದ ನುಣುಪಾಗಿರುವಂತೆ ತೋರುವ ಎತ್ತರದ ಶಿಖರ. ಆಹಾಹಾ.. ನೋಡಲು ಎರಡು ಕಣ್ಣು ಸಾಲದು. ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಭಾಸವಾಗುತ್ತದೆ. ದಟ್ಟ ಕಾಡು, ವಿಶಾಲವಾದ ಹುಲ್ಲುಗಾವಲಿನ ಪ್ರದೇಶ, ಅಲ್ಲಲ್ಲಿ ಹರಿಯುವ ಜಲಪಾತಗಳು.. ಚಾರಣಪ್ರಿಯರಿಗೆ ಇನ್ನೇನು ಬೇಕು ಹೇಳಿ….?
ನಿಮಗೆ ಒಂದು ಬಾರಿಯಾದರೂ ತಾನು ಬೆಟ್ಟ ಹತ್ತಬೇಕು, ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬೇಕು ಎಂಬ ಮನಸ್ಸಿದಲ್ಲಿ ಸೂಕ್ತ ಮಾರ್ಗದರ್ಶನದೊಂದಿಗೆ ತಪ್ಪದೆ ಇಲ್ಲಿಗೆ ಭೇಟಿ ನೀಡಿ. ಹಾಗಂತ ಚಾರಣದ ಹೆಸರಲ್ಲಿ ಪ್ರಕೃತಿಯನ್ನು ಕೊಳಕು ಮಾಡದೆ, ಸ್ವಚ್ಛತೆಯನ್ನು ಕಾಪಾಡಿ.