ಡೆಹ್ರಾಡೂನ್: ಕೋವಿಡ್ ಕಾರಣ ಎಲ್ಲಾ ಯಾತ್ರೆಗಳ ಮೇಲೆ ನಿರ್ಬಂಧ ಹೇರಿದ್ದ ಎರಡು ವರ್ಷಗಳ ತರುವಾಯ ಈ ವರ್ಷ ಚಾರ್ ಧಾಮ್ ಯಾತ್ರೆಗೆ ಸರ್ಕಾರ ಅನುವು ಮಾಡಿಕೊಟ್ಟಿದ್ದು, ಯಾತ್ರೆ ಆರಂಭವಾದ ಕೇವಲ ಆರು ದಿನಗಳಲ್ಲಿಯೇ 20 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಉತ್ತರಾಖಂಡ್ ಆರೋಗ್ಯ ಇಲಾಖೆ ತಿಳಿಸಿದೆ.
ಯಮುನೋತ್ರಿ ಮತ್ತು ಗಂಗೋತ್ರಿಧಾಮದಲ್ಲಿ ನೇಪಾಳದ ವ್ಯಕ್ತಿ ಸೇರಿ 14 ಯಾತ್ರಿಕರು ಸಾವನ್ನಪ್ಪಿದ್ದಾರೆ. ಇನ್ನು ಕೇದಾರನಾಥದಲ್ಲಿ 5 ಮತ್ತು ಬದರಿನಾಥದಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗೆ ಆರು ದಿನಗಳಲ್ಲಿ 20 ಯಾತ್ರಾರ್ಥಿಗಳು ಸಾವನ್ನಪ್ಪಿರುವುದು ಯಾತ್ರೆಯ ಆಯೋಜಕರು ಹಾಗೂ ಆಡಳಿತವನ್ನು ಚಿಂತೆಗೀಡು ಮಾಡಿದೆ.
ಈ 20 ಯಾತ್ರಾರ್ಥಿಗಳಲ್ಲಿ ಹೆಚ್ಚು ಮಂದಿ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದು, ಅವರೆಲ್ಲರೂ 60 ವರ್ಷ ಮೇಲ್ಪಟ್ಟವರು ಎಂದು ಇಲಾಖೆ ಮಾಹಿತಿ ನೀಡಿದೆ.
ಯಾತ್ರಾರ್ಥಿಗಳು ಕೇದಾರನಾಥ ಮತ್ತು ಯಮುನೋತ್ರಿ ಧಾಮಕ್ಕೆ ಪ್ರಯಾಸದಾಯಕ ಮಾರ್ಗದಲ್ಲಿ ಪಯಣಿಸಬೇಕಿದೆ. ಆದರೆ ಸರ್ಕಾರ ಆರೋಗ್ಯ ಪ್ರಮಾಣಪತ್ರ ಕಡ್ಡಾಯಗೊಳಿಸಿಲ್ಲ. ಅಲ್ಲದೇ ವ್ಯಾಕ್ಸಿನೇಷನ್ ಮತ್ತು ಕೊರೋನಾ ನೆಗೆಟಿವ್ ಪ್ರಮಾಣ ಪತ್ರವು ಕಡ್ಡಾಯ ಮಾಡಿರಲಿಲ್ಲ. ಯಾತ್ರಿಕರ ಸಂಖ್ಯೆಗೆ ಯಾವುದೇ ಮಿತಿ ಇಲ್ಲದ ಕಾರಣ ಚೆಕ್ ಪೋಸ್ಟ್ ನಲ್ಲಿ ವಿಪರೀತ ಜನಸಂದಣಿ ಇದೆ ಎಂದು ಉತ್ತರಕಾಶಿಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಕೆ.ಎಸ್. ಚೌಹಾಣ್ ಹೇಳಿದರು.