ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಶ್ಚಿತವೆಂದು ಹೇಳಿದ್ದ ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಣ್ಣಗಾಗಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ವಿಚಾರದಲ್ಲಿ ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿರುತ್ತೇನೆ. ಆತುರ ಬೇಡ ತಾಳ್ಮೆಯಿಂದ ಇರಿ ಎಂದು ಪಕ್ಷ ಹೇಳಿದ್ದು, ಟಿಕೆಟ್ ಸಿಗಲಿ, ಸಿಗದಿರಲಿ ಪಕ್ಷದ ಜೊತೆ ಇರುತ್ತೇನೆ ಎಂದು ಯೋಗೇಶ್ವರ್ ತಿಳಿಸಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಟಿಕೆಟ್ ಸಿಗದಿದ್ದರೆ ಜೆಡಿಎಸ್ ನಿಂದ ಸ್ಪರ್ಧಿಸುವ ಬಗ್ಗೆ ಆಸಕ್ತಿ ತೋರಿದ್ದರು. ಎರಡೂ ಪಕ್ಷಗಳಿಂದ ಟಿಕೆಟ್ ಸಿಗದಿದ್ದರೆ ಬೇರೆ ಪಕ್ಷದಿಂದ ಕಣಕ್ಕಿಳಿಯುವ ಚಿಂತನೆ ನಡೆಸಿದ್ದರು.
ಆದರೆ, ದೆಹಲಿಯಲ್ಲಿ ಬಿಜೆಪಿ ಹಿರಿಯ ಮುಖಂಡರು, ರಾಷ್ಟ್ರೀಯ ನಾಯಕರನ್ನು ಭೇಟಿಯಾದ ಬಳಿಕ ನಿಲುವು ಬದಲಿಸಿದ್ದಾರೆ. ನನ್ನ ಜೊತೆ ಪಕ್ಷವಿದೆ. ಪಕ್ಷದ ವರಿಷ್ಠರು ಜೊತೆಗಿದ್ದಾರೆ. ಟಿಕೆಟ್ ಸಿಗಲಿ, ಸಿಗದಿರಲಿ ನಾನು ಪಕ್ಷದ ಜೊತೆಗೆ ಇರುತ್ತೇನೆ. ಪಕ್ಷದ ಆದೇಶ ಮೀರಿ ಹೋಗಬಾರದು ಎನಿಸಿದೆ ಎಂದು ತಿಳಿಸಿದ್ದಾರೆ.
ನಮ್ಮ ಪಕ್ಷದ ನಾಯಕರು ಮತ್ತು ಹೆಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆ ದಿನಾಂಕ ಚುನಾವಣೆ ಘೋಷಣೆಯಾದ ಬಳಿಕ ಟಿಕೆಟ್ ಬಗ್ಗೆ ತೀರ್ಮಾನಿಸುತ್ತಾರೆ. ದೆಹಲಿ ಭೇಟಿಯ ವೇಳೆ ಹೈಕಮಾಂಡ್ ನಾಯಕರು ಅನೇಕ ಸಲಹೆ ಸೂಚನೆ ನೀಡಿದ್ದು, ಎರಡೂ ಪಕ್ಷದ ಮುಖಂಡರು ಒಟ್ಟಾಗಿ ಹೋಗಬೇಕಿದೆ. ನಾವು ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರಬೇಕು ಎಂದು ಯೋಗೇಶ್ವರ್ ಹೇಳಿದ್ದಾರೆ.
ಎನ್.ಡಿ.ಎ. ಯಿಂದ ಯಾರೇ ಅಭ್ಯರ್ಥಿಯಾಗಲಿ ಆದಷ್ಟು ಬೇಗ ತೀರ್ಮಾನವಾದರೆ ಒಳ್ಳೆಯದು. ಉಪಚುನಾವಣೆಯಲ್ಲಿ ನಾವು ಸರ್ಕಾರದ ವಿರುದ್ಧ ಹೋರಾಡಬೇಕಿದೆ. ಆದಷ್ಟು ಬೇಗನೆ ಪಕ್ಷದ ಅಭ್ಯರ್ಥಿ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಜೆಡಿಎಸ್ ಗೆ ಟಿಕೆಟ್ ನೀಡಿದಲ್ಲಿ ನಾನು ಹಾಗೂ ನಮ್ಮ ಕಾರ್ಯಕರ್ತರು ಅವರ ಪರವಾಗಿ ಕೆಲಸ ಮಾಡುತ್ತೇವೆ. ಮುಂದೆ ಅವಕಾಶ ಸಿಗುತ್ತೆ ಕಾದು ನೋಡೋಣ ಎಂದು ಹೇಳಿದ್ದಾರೆ.