ನವದೆಹಲಿ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಸ್ಪರ್ಧಿಸುವುದು ಖಚಿತವಾಗಿದೆ.
ಅಭ್ಯರ್ಥಿ ಆಯ್ಕೆಯ ಕುರಿತಾಗಿ ಬಿಜೆಪಿ, ಜೆಡಿಎಸ್ ನಾಯಕರು ಸಮಾಲೋಚನೆ ನಡೆಸಿದ್ದಾರೆ. ತಮ್ಮನ್ನೇ ಕಣಕ್ಕೆ ಇಳಿಸಬೇಕೆಂದು ಸಿ.ಪಿ. ಯೋಗೇಶ್ವರ್ ಪಟ್ಟು ಹಿಡಿದಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮನವೊಲಿಸಬೇಕೆಂದು ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ದೆಹಲಿ ನಿವಾಸದಲ್ಲಿ ರಾಜ್ಯ ಬಿಜೆಪಿ ನಾಯಕರು ಹಾಗೂ ಹೆಚ್.ಡಿ. ಕುಮಾರಸ್ವಾಮಿ ಸಭೆ ನಡೆಸಿದ್ದು, ಈ ಬಾರಿ ಯೋಗೇಶ್ವರ್ ಗೆ ಅವಕಾಶ ನೀಡಬೇಕೆಂದು ಮನವಿ ಮಾಡಲಾಗಿದೆ. ಇದಕ್ಕೆ ಕುಮಾರಸ್ವಾಮಿ ಒಪ್ಪಿಲ್ಲ. ಬಿಜೆಪಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಹೆಜ್ಜೆ ಇಡುವ ಬಗ್ಗೆ ತಿಳಿಸಿದ್ದಾರೆ.
ಈ ಕ್ಷೇತ್ರದಲ್ಲಿ ಜೆಡಿಎಸ್ ಗೆ ತನ್ನದೇ ಆದ ಬಲವಿದೆ. ಎರಡು ಬಾರಿ ಇದೇ ಕ್ಷೇತ್ರದಿಂದ ಕುಮಾರಸ್ವಾಮಿ ಆಯ್ಕೆಯಾಗಿದ್ದು, ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇನ್ನು ಟಿಕೆಟ್ ಸಿಗಲಿ, ಬಿಡಲಿ ಸ್ಪರ್ಧೆಯಂತೂ ನಿಶ್ಚಿತವೆಂದು ಸಿ.ಪಿ. ಯೋಗೇಶ್ವರ್ ಹೇಳಿದ್ದು, ನಾಯಕರ ಮುಂದೆ ಮೂರು ಆಯ್ಕೆಗಳನ್ನು ಇಟ್ಟಿದ್ದಾರೆ. ಬಿಜೆಪಿಯಿಂದ ಸ್ಪರ್ಧೆಗೆ ಟಿಕೆಟ್ ನೀಡಬೇಕು. ಒಂದು ವೇಳೆ ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂದಾದಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ ಆಗುತ್ತೇನೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಪಟ್ಟು ಸಡಿಲಿಸದಿದ್ದರೆ ಬಿಜೆಪಿ ಮೈತ್ರಿ ಮುರಿದುಕೊಳ್ಳಬೇಕು. ತ್ರಿಕೋನ ಸ್ಪರ್ಧೆ ನಡೆಯಲಿದ್ದು, ಯಾರ ಶಕ್ತಿ ಎಷ್ಟು ಎಂಬುದು ಗೊತ್ತಾಗುತ್ತದೆ. ನಾನು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆದ್ದು ತೋರಿಸುತ್ತೇನೆ ಎಂದು ಪಕ್ಷದ ನಾಯಕರಿಗೆ ಯೋಗೇಶ್ವರ್ ತಿಳಿಸಿದ್ದಾರೆ. ಒಂದು ವೇಳೆ ಟಿಕೆಟ್ ಕೊಡದಿದ್ದರೆ ಬಿಎಸ್ಪಿಯಿಂದ ಸ್ಪರ್ಧಿಸಲು ಬಯಸಿದ್ದೇನೆ. ಆ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ನಾಯಕರ ಗಮನಕ್ಕೆ ತಂದಿದ್ದಾರೆ.