ಬೆಂಗಳೂರು: ಮುಡಾ ಹಗರಣ ವಿರೋಧಿಸಿ ಬಿಜೆಪಿಯಿಂದ ಬೆಂಗಳೂರುನಿಂದ ಮೈಸೂರಿಗೆ ಮೈಸೂರು ಚಲೋ ಪಾದಯಾತ್ರೆ ನಡೆಸಲಾಗಿದೆ. ಇದರ ಬೆನ್ನಲ್ಲೇ ಬಿಜೆಪಿಯ ಅತೃಪ್ತ ನಾಯಕರು ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಈ ನಡುವೆ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದೆ.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಗೆ ಸಿ.ಪಿ. ಯೋಗೇಶ್ವರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಲು ಯೋಗೇಶ್ವರ್ ನಿರ್ಧರಿಸಿದ್ದಾರೆ. ಪಕ್ಷೇತರನ್ನಾಗಿ ಮತ್ತೆ ಗೆದ್ದು ಎನ್.ಡಿ.ಎ. ಭಾಗವಾಗುವೆ. ಸ್ಪರ್ಧೆ ವಿಚಾರ ಏನೇನೋ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಏನಾಗುತ್ತದೆ ಎಂಬುದನ್ನು ಮುಂದೆ ನೋಡೋಣ ಎಂದು ಯೋಗೇಶ್ವರ್ ತಿಳಿಸಿದ್ದಾರೆ.
ನಮ್ಮ ತಾಲೂಕಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದು, ಯಾವುದೇ ಚಿಹ್ನೆಯಡಿ ಸ್ಪರ್ಧೆ ಮಾಡಿದರೂ ಗೆಲ್ಲಿಸುತ್ತಾರೆ. ಯಾವುದೇ ಕಾರಣಕ್ಕೂ ಚನ್ನಪಟ್ಟಣ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟು ಕೊಡಬಾರದು. ಎನ್.ಡಿ.ಎ. ವಶಕ್ಕೆ ತೆಗೆದುಕೊಳ್ಳಬೇಕು ಎಂದು ನಿರ್ಣಯ ಕೈಗೊಂಡಿದ್ದೇವೆ. ನನಗೆ ಬಿಜೆಪಿಯಿಂದ ಟಿಕೆಟ್ ಸಿಗುವ ವಿಶ್ವಾಸವಿದೆ. ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.