ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಗೆ ಎನ್ ಡಿಎ ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ತೀವ್ರ ಕುತೂಹಲ ಹೆಚ್ಚುತ್ತಿದೆ. ಈ ನಡುವೆ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಅವರನ್ನು ಎನ್ ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತೊಂದೆಡೆ ಜೆಡಿಎಸ್ ನಾಯಕ ನಿಖಿಲ್ ಗೆ ಟಿಕೆಟ್ ನೀಡಬೇಕು ಎಂಬ ಚರ್ಚೆಯೂ ನಡೆಯುತ್ತಿದೆ. ಈ ಗೊಂದಲಗಳ ನಡುವೆಯೇ ವಿಪಕ್ಷ ನಾಯಕ ಆರ್.ಅಶೋಕ್ ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಈಗಗಾಲೇ ಸಂಡೂರು ಹಾಗೂ ಶಿಗ್ಗಾಂವಿಗೆ ಬಿಜೆಪಿ ನಾಯಕರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಬಾಕಿ ಇದೆ. ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆದಿದೆ. ಬಹುತೇಕ ಅಭ್ಯರ್ಥಿ ಫೈನಲ್ ಆಗಿದೆ ಎಂದರು.
ಚನ್ನಪಟ್ಟಣ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮುಕ್ತಮನಸ್ಸು ಹೊಂದಿದ್ದಾರೆ. ಯಾರೇ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಎನ್ ಡಿಎ ಗೆಲುವು ಸಾಧಿಸಬೇಕು ಎಂದಿದ್ದಾರೆ. ಹಾಗಾಗಿ ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆಯೊಳಗೆ ಚನ್ನಪಟ್ಟಣಕ್ಕೆ ಎನ್ ಡಿಎ ಅಭ್ಯರ್ಥಿ ಘೋಷಿಸಲಾಗುವುದು. ಯಾರೇ ಅಭ್ಯರ್ಥಿಯಾದರೂ ರೆಬಲ್ ಆಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.