
ಬೆಂಗಳೂರು: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿ ಆದರೂ ನನಗೆ ಮತ ಹಾಕಿದಂತೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಪುನರುಚ್ಚರಿಸಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆ ಸಂಬಂಧ ಬಿಜೆಪಿ, ಜೆಡಿಎಸ್ ಪಕ್ಷಗಳು ಚರ್ಚೆ ನಡೆಸಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿ ಫಾರಂ ಬರೆವುದು, ಅದಕ್ಕೆ ಸಹಿ ಹಾಕುವುದು ನಾನು. ಮಾಧ್ಯಮದವರನ್ನು ನಿಲ್ಲಿಸಿದರೂ ನನಗೆ ಓಟು ಎಂದು ಹೇಳಿದರು.
ಎರಡು ವಿರೋಧ ಪಕ್ಷಗಳು ಒಂದಾಗಿವೆ ಎಂದು ಕೇಳಿದಾಗ “ಒಂದು, ಎರಡು, ಮೂರಾದರೂ ಆಗಲಿ ನಮಗೆ ಅದು ಸಂಬಂಧವಿಲ್ಲ. ನಾವು ಜನಸೇವೆ ಮಾಡುತ್ತೇವೆ, ಅದರ ಮೇಲೆ ಮಿಕ್ಕಿದ್ದನ್ನು ಜನರ ತೀರ್ಮಾನಕ್ಕೆ ಬಿಟ್ಟಿದ್ದು” ಎಂದರು.
ಸಿ.ಪಿ.ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಮಾಡುವಿರಾ ಎಂಬ ಪ್ರಶ್ನೆಗೆ ನಮ್ಮ ಬಳಿಗೆ ಯಾರೂ ಬಂದಿಲ್ಲ, ಚರ್ಚೆಯನ್ನೂ ಮಾಡಿಲ್ಲ. ಅವರು ಮೈತ್ರಿ ಮಾಡಿಕೊಂಡಿರುವಾಗ ಏಕೆ ಅವರ ಬಗ್ಗೆ ಮಾತನಾಡಬೇಕು. ಮೊದಲು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತೇನೆ ಎಂದರು.
ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎನ್ನುವ ಸಿ.ಪಿ.ಯೋಗೇಶ್ವರ್ ಹೇಳಿಕೆಯ ಸುದ್ದಿ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಹೇಳಿದರು.
ಸೇವೆ ಮಾಡಲು ನಮಗೆ ಅಧಿಕಾರ, ಅವಕಾಶ ನೀಡಿದ್ದಾರೆ. ನಾವು ನಮ್ಮ ಅಧಿಕಾರ ಬಳಸಿಕೊಂಡು ಜನರಿಗಾಗಿ ಯಾವ ರೀತಿ ಒಳ್ಳೆಯದು ಮಾಡಬೇಕು ಎಂಬುದು ನಮ್ಮ ಸರ್ಕಾರದ ಚಿಂತನೆ. ಗುರುವಾರ ಎತ್ತಿನಹೊಳೆ ಯೋಜನೆ ಪರೀಕ್ಷಾರ್ಥ ಕಾರ್ಯಾಚರಣೆ ವೀಕ್ಷಣೆಗೆ ಹೋಗಿದ್ದೆ. ಕೆಲವರು ಮೂಗು, ಬಾಯಿ, ಕಿವಿ ಕತ್ತರಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. ಆದರೆ ನಾನು ಏತ ಕಾಮಗಾರಿ ಪರೀಕ್ಷಾರ್ಥ ಕಾರ್ಯಾಚರಣೆ ಚಾಲನೆ ನೀಡಿದ್ದು, ಸಧ್ಯದಲ್ಲೇ ಶುಭ ಮುಹೂರ್ತ ನೋಡಿ ಉದ್ಘಾಟನಾ ದಿನಾಂಕ ನಿಗದಿ ಮಾಡಲಿದ್ದೇವೆ. ಈ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ. ಇದು ನಮ್ಮ ಕೆಲಸದ ವೈಖರಿ ಎಂದರು.
ಅದೇ ರೀತಿ ಉದ್ಯೋಗ ಮೇಳ ಮೂಲಕ ನಮ್ಮ ಭಾಗದ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡುತ್ತಿದ್ದೇವೆ. ನಾನು ಜಿಲ್ಲೆಗೆ ಹೋದಾಗಲೆಲ್ಲಾ ಕೆಲಸ ಕೊಡಿಸಿ ಎಂದು ಯುವಕರು ಅರ್ಜಿ ನೀಡುತ್ತಿದ್ದರು. ನಮಗೆ ಅರ್ಜಿ ಕೊಟ್ಟವರನ್ನು ಕರೆಸುತ್ತಿದ್ದೇವೆ. ಎಷ್ಟು ಜನರಿಗೆ ಉದ್ಯೋಗ ಸಿಗುತ್ತೋ ಸಿಗಲಿ. ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.