ರಾಮನಗರ: ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ನಿಟ್ಟಿನಲ್ಲಿ ಪೈಪೋಟಿ ಆರಂಭವಾಗಿದೆ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಚನ್ನಪಟ್ಟಣ ಕ್ಷೇತ್ರದ ರಾಜಕೀಯ ರಂಗೇರಿದೆ.
ಈವರೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಾವೇ ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್ನುವಂತೆ ಬಿಂಬಿಸಿಕೊಂಡು ಪ್ರಚಾರ ನಡೆಸಿದ್ದರು. ಇದೀಗ ಅಭ್ಯರ್ಥಿಯಾರೇ ಆದರೂ ನಾನೇ ಅಭ್ಯರ್ಥಿ ಎಂದುಕೊಂಡು ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಇದೇ ವೇಳೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಇಮ್ಮಡಿಗೊಂಡಿರುವಾಗಲೇ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಈ ಬಗ್ಗೆ ಸುಳಿವು ನೀಡಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಸಿ.ಪಿ.ಯೋಗೇಶ್ವರ್, ಚನ್ನಪಟ್ಟಣ ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿ ನನ್ನನ್ನೇ ನಿಲ್ಲುವಂತೆ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅದಕ್ಕೆ ಅಧಿಕೃತ ಅನುಮೋದನೆ ಅವರೇ ಕೊಡಬೇಕು ಎಂದಿದ್ದಾರೆ.
ಮೈತ್ರಿ ಪಕ್ಷದ ವರಿಷ್ಠರು ಅಧಿಕೃತವಾಗಿ ಘೋಷಣೆ ಮಾಡಬೇಕು. ಹಾಗಾಗಿ ನೀವೇ ಬಂದು ಹೆಸರು ಘೋಷಣೆ ಮಾಡಿ ಎಂದು ಕುಮಾರಸ್ವಾಮಿ ಅವರನ್ನೇ ಕೇಳಿದ್ದೇನೆ ಎಂದು ಹೇಳಿದ್ದಾರೆ.
ಕಳೆದ ವಾರ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದೆ. ಮೈತ್ರಿ ಅಭ್ಯರ್ಥಿ ಶೀಘ್ರವಾಗಿ ಘೋಷಿಸಿ ಎಂದು ಕೇಳಿದ್ದೆ. ಈ ವೇಳೆ ಕುಮಾರಸ್ವಾಮಿ ನನ್ನನ್ನೇ ನಿಲ್ಲುವಂತೆ ಹೇಳಿದ್ದಾರೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಕಳೆದ ವಾರ ಮೂರು ದಿನ ಜನಸ್ಪಂದನಾ ಕಾರ್ಯಕ್ರಮ ಮಾಡಿದ್ದಾರೆ. ಉಪಚುನಾವಣೆ ದೃಷ್ಟಿಯಿಂದ ಮಾಡಿರುವ ಸರ್ಕಾರಿ ಸಂತೆ. ಯಾವುದೇ ಗುರಿ, ಯೋಜನೆಗಳಿಲ್ಲದೆ ಮಾಡಿರುವ ಕಾರ್ಯಕ್ರಮ. ಅಧಿಕಾರಿಗಳನ್ನು ಚನ್ನಪಟ್ಟಣಕ್ಕೆ ಕರೆತಂದು ಹೆದರಿಸಿ ಜನರಿಗೆ ಆಸೆ ತೋರಿಸುವ ಕೆಲಸ. ಕಳೆದ ಒಂದು ವರ್ಷಗಳಿಂದ ಸರ್ಕಾರ ಚನ್ನಪಟ್ಟಣ ಕ್ಷೇತ್ರದ ಜನರಿಗೆ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.