ಕಳೆದ ಕೆಲವು ದಿನಗಳಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವೆ ವಾಗ್ಯುದ್ಧ ಆರಂಭವಾಗಿದೆ. ಇಬ್ಬರೂ ಸಹ ಪರಸ್ಪರರನ್ನು ಏಕವಚನದಲ್ಲಿ ನಿಂದಿಸಿಕೊಂಡು ಆರೋಪ – ಪ್ರತ್ಯಾರೋಪ ಮಾಡುತ್ತಿದ್ದಾರೆ. ಇದರ ಮಧ್ಯೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಕುಮಾರಸ್ವಾಮಿಯವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ರಾಜೀನಾಮೆ ನೀಡಿದ್ದು, ಇಲ್ಲಿ ಈಗ ಉಪಚುನಾವಣೆ ನಡೆಯಬೇಕಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸಹೋದರ ಡಿ.ಕೆ. ಸುರೇಶ್ ಅವರ ಸೋಲಿಗೆ ಕುಮಾರಸ್ವಾಮಿಯವರೇ ಕಾರಣ ಎಂಬ ಹಿನ್ನೆಲೆಯಲ್ಲಿ ಜೆಡಿಎಸ್ ಭದ್ರಕೋಟೆಯಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ತಾವು ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವನ್ನು ಅವರು ಈಗಾಗಲೇ ಹಲವು ಬಾರಿ ಬಹಿರಂಗವಾಗಿಯೇ ಹೇಳಿದ್ದಾರೆ.
ಇದೀಗ ಗುರುವಾರದಂದು ನಡೆದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಚನ್ನಪಟ್ಟಣದಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಡಿ.ಕೆ. ಶಿವಕುಮಾರ್ ತಾವು ಈ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವನ್ನು ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸಿ.ಪಿ. ಯೋಗೇಶ್ವರ್, ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಕ್ಕವೇ ಕುಳಿತಿದ್ದು ಈ ಕ್ಷೇತ್ರದ ಉಪಚುನಾವಣೆ ಮತ್ತೊಂದು ಮೈತ್ರಿಗೆ ನಾಂದಿ ಆಗುತ್ತಾ ಎಂಬ ಕುತೂಹಲ ಮನೆ ಮಾಡಿದೆ.
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ತಮಗೆ ಸ್ಪರ್ಧಿಸಲು ಬಿಜೆಪಿಯಿಂದ ಅವಕಾಶ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಸಿ.ಪಿ. ಯೋಗೇಶ್ವರ್ ಈಗಾಗಲೇ ಘೋಷಿಸಿದ್ದು, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಶಿವಕುಮಾರ್ ಅವರೊಂದಿಗೆ ಕಾಣಿಸಿಕೊಳ್ಳುವ ಮೂಲಕ ತಮ್ಮ ಪಕ್ಷದ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ಒಂದೊಮ್ಮೆ ತನಗೆ ಟಿಕೆಟ್ ನೀಡದಿದ್ದರೆ ಡಿ.ಕೆ. ಶಿವಕುಮಾರ್ ಅವರಿಗೆ ಸಿ.ಪಿ. ಯೋಗೇಶ್ವರ್ ಬೆಂಬಲಿಸುವ ಸಾಧ್ಯತೆಯೂ ಇದೆ.