
ದಾವಣಗೆರೆ: ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಕಲ್ಲು ತೂರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಟ್ಕಾ ಜುಜಾಟ ನಡೆಸುತ್ತಿದ್ದ ಆರೋಪದ ಮೇಲೆ ಆದಿಲ್ ಎಂಬಾತನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿದ್ದ ಸಂದರ್ಭದಲ್ಲಿ ಪೊಲೀಸ್ ವಶದಲ್ಲಿದ್ದ ಆದಿಲ್ ಮೃತಪಟ್ಟಿದ್ದ. ಉದ್ರಿಕ್ತರ ಗುಂಪು ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದು, ಪೋಲಿಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಹಾನಿ ಮಾಡಿತ್ತು.
ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದರು. ಸಿಸಿ ಕ್ಯಾಮೆರಾ, ಮೊಬೈಲ್ ಚಿತ್ರೀಕರಣ ವಿಡಿಯೋ, ಸಾರ್ವಜನಿಕರು ಚಿತ್ರೀಕರಿಸಿದ ವಿಡಿಯೋ ಆಧರಿಸಿ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದು, 5 ತಂಡಗಳ ಮೂಲಕ ವಿಡಿಯೋ ಪರಿಶೀಲಿಸಿ 40 ಕ್ಕೆ ಹೆಚ್ಚು ಕಿಡಿಗೇಡಿಗಳನ್ನು ಗುರುತಿಸಲಾಗಿದೆ. 10 ಜನರನ್ನು ವಶಕ್ಕೆ ಪಡೆಯಲಾಗಿದೆ. ಉಳಿದವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.