ಮೈಸೂರು: ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚನ್ನಗಿರಿಯಲ್ಲಿ ನಡೆದಿರುವುದು ಲಾಕಪ್ ಡೆತ್ ಅಲ್ಲ, ಆರೋಪಿಗೆ ಮೂರ್ಛೆ ರೋಗವಿತ್ತು. ಠಾಣೆಗೆ ಕರೆತಂದ ವೇಳೆ ಆತನಿಗೆ ಪಿಟ್ಸ್ ಬಂದಿತ್ತು. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಮೂರ್ಛೆ ರೋಗದಿಂದ ಆತ ಸಾವನ್ನಪ್ಪಿದ್ದಾನೆ ಎಂದು ಹೇಳಿದರು.
ಆತ ಮೂರ್ಛೆ ರೋಗದಿಂದ ಮೃತಪಟ್ಟಿದ್ದಾನೆ. ಆದರೆ ಎಫ್ಐಆರ್ ಇಲ್ಲದೇ ಪೊಲೀಸರು ಠಾಣೆಗೆ ಕರೆತಂದಿದ್ದು ತಪ್ಪು. ಈ ತಪ್ಪಿಗಾಗಿ ಪೊಲೀಸ್ ಅಧಿಕಾರಿಗಳ ಅಮಾನತಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆ ಚನ್ನಗಿರಿ ಠಾಣೆ ಪೊಲೀಸರು ಶುಕ್ರವಾರ ಆದಿಲ್ ಎಂಬ ಆರೋಪಿಯನ್ನು ಠಾಣೆಗೆ ಕರೆತರುತ್ತಿದ್ದಂತೆ ಆತ ಕುಸಿದುಬಿದ್ದಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಮೃತಪಟ್ಟಿದ್ದ. ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ ಆದಿಲ್ ಸಂಬಂಧಿಕರು ಇದು ಲಾಕಪ್ ಡೆತ್ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ ಕಲ್ಲುತೂರಾಟ ನಡೆಸಿದ್ದರು. ಪೊಲೀಸರು ಎಫ್ಐಆರ್ ಇಲ್ಲದೇ ಆರೋಪಿಯನ್ನು ಠಾಣೆಗೆ ಕರೆತಂದಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಎಂ ಸೂಚಿಸಿದ್ದಾರೆ.