ಚಿತ್ರದುರ್ಗ: ಲಾಕಪ್ ಡೆತ್ ಆರೋಪ ಹಾಗೂ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದೆ. ಠಾಣೆಗೆ ನುಗ್ಗಿ ಹೊಡೆಯುತ್ತಾರೆ ಎಂದರೆ ಸರ್ಕಾರ ಇದೆಯಾ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ರಾಜ್ಯ ಲಾಲೂ ಪ್ರಸಾದ್ ಆಡಳಿತದ ಬಿಹಾರದಂತಾಗಿದೆ. ಠಾಣೆಗೆ ನುಗ್ಗಿ ಗಲಾಟೆ ಮಾಡಿ, ಕಲ್ಲು ತೂರಾಟ ನಡೆಸುತ್ತಾರೆ ಎಂದರೆ ಪೊಲೀಸರ ಬಗ್ಗೆ ಕಿಂಚಿತ್ತೂ ಭಯವಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯಾ? ಎಂದು ಕಿಡಿಕಾರಿದರು.
ಸರ್ಕಾರ, ಸಚಿವರು ಇದ್ದಾರೆ ಎಂಬುದನ್ನು ಜನರು ಮರೆತಂತಾಗಿದೆ. ಯಾರಿಗೂ ಕೂಡ ಪೊಲೀಸ್ ವ್ಯವಸ್ಥೆ ಬಗ್ಗೆ ಭಯವಿಲ್ಲದಂತಾಗಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಕೇಸ್ ನಡೆಯಿತು. ಸಾವಿರಾರು ಜನರು ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ಮಾಡಿದ್ದರು. ಈಗ ಚನ್ನಗಿರಿಯಲ್ಲಿ ಠಾಣೆಗೆ ನುಗ್ಗಿ ಹೊಡೆಯುತ್ತಿದ್ದಾರೆ. ಪೊಲೀಸರ ರಕ್ಷಣೆಗೆ ಪೊಲೀಸರೇ ಬರುವ ದುಸ್ಥಿತಿ ಇದೆ. ಸಿಎಂ, ಡಿಸಿಎಂ ಠಾಣೆಯ ಮೇಲೆ ದಾಳಿ ಮಾಡಿದವರು ಅಮಾಯಕರು ಎನ್ನುತ್ತಿದ್ದಾರೆ. ಅಮಾಯಕರೆಂದು ಅಲ್ಪಸಂಖ್ಯಾತರ ತುಷ್ಟೀಕರಣ ನಡೆಯುತ್ತಿದೆ. ದಾಳಿ ಮಾಡಿದವರೆಲ್ಲ ಅಮಾಯಕರೇ? ಚನ್ನಗಿರಿಯ ಲಾಕಪ್ ಡೆತ್ ಬಗ್ಗೆ ಸ್ಪಷ್ಟ ಮಾಹಿತಿ ಹೊರಬರಬೇಕಿದೆ ಎಂದರು.
ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯ ಲಾಲು ಪ್ರಸಾದ್ ಆಡಳಿತದ ಬಿಹಾರದತಾಗಿದೆ. ಇನ್ನು ರಾಜ್ಯದ ಜನರನ್ನು ಆ ಭಗವಂತನೇ ಕಾಪಾಡಬೇಕು ಎಂದು ಕಳವಳ ವ್ಯಕ್ತಪಡಿಸಿದರು.