ಮನೆಯೇ ಮೊದಲ ಪಾಠ ಶಾಲೆ. ಮಕ್ಕಳ ಮೊದಲ ಕಲಿಕೆ ಮನೆಯಿಂದಲೇ ಶುರುವಾಗುತ್ತದೆ. ಹಿರಿಯರಿಗೆ ಅಗೌರವ ತೋರುವುದು, ಅಸಭ್ಯ ಭಾಷೆಯ ಬಳಕೆಯನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸದಿದ್ದರೆ, ಮಕ್ಕಳು ಬೆಳೆದ ನಂತರ ಅದೇ ಅಭ್ಯಾಸವಾಗಿಬಿಡುತ್ತೆ. ಹಾಗಾಗಿ ಮಕ್ಕಳನ್ನು ಬೆಳೆಸುವಾಗ ಎಚ್ಚರಿಕೆ ಬಹಳ ಮುಖ್ಯ.
ಸಾಮಾನ್ಯವಾಗಿ ಮಕ್ಕಳು 2-3 ವರ್ಷ ವಯಸ್ಸಿನಲ್ಲಿ ಮಾತು ಗ್ರಹಿಸಲು ಪ್ರಾರಂಭಿಸುತ್ತಾರೆ. ತಮ್ಮ ಸ್ನೇಹಿತರು ಮತ್ತು ಕಿರಿಯ ಸಹೋದರರು ಮತ್ತು ಸಹೋದರಿಯರ ಜೊತೆ ಆಟವಾಡುವಾಗ ಆಟಿಕೆಗಳ ವಿಚಾರದಲ್ಲಿ ಭಿನ್ನಾಭಿಪ್ರಾಯ ಸಾಮಾನ್ಯ. ಆದರೆ ಇದನ್ನು ಮಕ್ಕಳೆಂದು ಹಾಗೇ ಬಿಟ್ಟರೆ ಮುಂದೆ ಬದಲಾವಣೆ ಕಷ್ಟ. ಮಕ್ಕಳಿಗೆ ಅವರ ವಸ್ತುಗಳು ಮತ್ತು ಆಟಿಕೆಗಳನ್ನು ಹಂಚಿಕೊಳ್ಳಲು ಕಲಿಸಬೇಕು.
ಮಕ್ಕಳಿಗೆ ಬರೀ ಓದು, ಪಾಠ ಮಾತ್ರ ಮುಖ್ಯವಲ್ಲ. ಬೇರೆಯವರ ಜೊತೆ ಬೆರೆಯುವುದು ಹೇಗೆ? ದೊಡ್ಡವರ ಜೊತೆ ಹೇಗೆ ಮಾತನಾಡಬೇಕು ಎಂಬುದನ್ನೆಲ್ಲ ಕಲಿಸಬೇಕಾಗುತ್ತದೆ. ಹಿರಿಯರು ಮಾಡುವುದನ್ನೇ ಮಕ್ಕಳು ಅನುಸರಿಸುತ್ತಾರೆ. ಹಾಗಾಗಿ ಮಕ್ಕಳ ಮುಂದೆ ನಾವೂ ಸಭ್ಯವಾಗಿ ವರ್ತಿಸಬೇಕು. ಅಸಭ್ಯ ಭಾಷೆ ಬಳಸಬಾರದು. ಹಿರಿಯರನ್ನು ಗೌರವಿಸಿದ್ರೆ ಮಕ್ಕಳೂ ಅದನ್ನು ಅನುಸರಿಸುತ್ತಾರೆ.
ಮಕ್ಕಳಿಗೆ ದೈಹಿಕ ವ್ಯಾಯಾಮ ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಟಿವಿ, ಮೊಬೈಲ್, ಗೇಮ್ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿದೆ. ಮಕ್ಕಳು ಶಾಂತವಾಗಿರಲಿ ಎನ್ನುವ ಕಾರಣಕ್ಕೆ ಮೊಬೈಲ್ ಕೈಗೆ ನೀಡುವ ಬದಲು ಸಂಜೆ ಮಕ್ಕಳನ್ನು ಸುತ್ತಾಡಲು ಉದ್ಯಾವನಕ್ಕೆ ಕರೆದುಕೊಂಡು ಹೋಗಿ. ಉಳಿದ ಮಕ್ಕಳ ಜೊತೆ ಬೆರೆಯಲು ಬಿಡಿ.
ಮಕ್ಕಳಿಗೆ ಕಂಡಿದ್ದೆಲ್ಲ ಬೇಕು. ಕೊಡಿಸದೆ ಹೋದ್ರೆ ಹಠ, ಗಲಾಟೆ ಮಾಡೋದು ಸಾಮಾನ್ಯ. ನಿಮ್ಮ ಮಕ್ಕಳೊಂದೇ ಅಲ್ಲ ಎಲ್ಲ ಮಕ್ಕಳೂ ಹೀಗೆ. ಹಾಗಂತ ಮಕ್ಕಳು ಕೇಳಿದನೆಲ್ಲಾ ತಕ್ಷಣ ಕೊಡಿಸಬೇಡಿ. ಅದ್ರ ಅಗತ್ಯತೆ ನಿನಗೆಷ್ಟಿದೆ ಎಂಬುದನ್ನು ವಿವರಿಸಿ. ಅಗತ್ಯವಿಲ್ಲದ ವಸ್ತುಗಳನ್ನು ಖರೀದಿ ಮಾಡಬಾರದು ಎನ್ನುವ ಬಗ್ಗೆ ವಿವರಿಸಿ ಹೇಳಿ.