
ಕಾರ್ಟೂನ್‌ಗಳು ಮಕ್ಕಳ ಫೇವರಿಟ್. ಇತ್ತೀಚೆಗಂತೂ ಮಕ್ಕಳು ಟಿವಿ ಮತ್ತು ಮೊಬೈಲ್ ಹುಚ್ಚು ಬೆಳೆಸಿಕೊಳ್ತಿದ್ದಾರೆ. 1990ರ ದಶಕದಲ್ಲಿ ಟಾಮ್ & ಜೆರ್ರಿ, ದಿ ಜಂಗಲ್ ಬುಕ್, ಟೇಲ್‌ಸ್ಪಿನ್, ಡೊನಾಲ್ಡ್ ಡಕ್, ಡಕ್ ಟೇಲ್ಸ್, ಸ್ಪೈಡರ್ ಮ್ಯಾನ್, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್ ಹೀಗೆ ತರಹೇವಾರಿ ಕಾರ್ಟೂನ್‌ಗಳನ್ನು ಮಕ್ಕಳು ಇಷ್ಟಪಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಡೋರೇಮನ್, ಶಿನ್-ಚಾನ್, ಓಗಿ & ಕೊಕ್ರೋಚಸ್ ಮಕ್ಕಳ ಫೇವರಿಟ್ ಆಗಿದೆ.
ಕಳೆದ ಕೆಲವು ದಶಕಗಳಿಗೆ ಹೋಲಿಸಿದರೆ ಈಗ ಮಕ್ಕಳ ಕಾರ್ಟೂನ್ ವೀಕ್ಷಣೆ ಹೆಚ್ಚಾಗಿದೆ. 90ರ ದಶಕದಲ್ಲಿ ಅಂತಹ ಕಾರ್ಯಕ್ರಮಗಳನ್ನು ದೂರದರ್ಶನದ ಮೂಲಕ ಮಾತ್ರ ನೋಡಬಹುದಿತ್ತು. ಆದ್ರೀಗ ಟಿವಿ, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್, ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳಂತಹ ಹಲವಾರು ಗ್ಯಾಜೆಟ್‌ಗಳು ಮನೆಯಲ್ಲಿರುತ್ತವೆ. ಮಕ್ಕಳು ಇಂಟರ್ನೆಟ್ ಮೂಲಕ ನಿರಂತರವಾಗಿ ಕಾರ್ಟೂನ್ ನೋಡುತ್ತಲೇ ಇರುತ್ತಾರೆ.
ಮನಃಶಾಸ್ತ್ರಜ್ಞರ ಅಭಿಪ್ರಾಯವೇನು?
ಮಕ್ಕಳು ಕೊಂಚ ಕಿರಿಕಿರಿ ಮಾಡಿದರೆ ತಾಯಿ ಅದನ್ನು ತಪ್ಪಿಸಲು ಕಾರ್ಟೂನ್ ತೋರಿಸುತ್ತಾರೆ. ಈ ಅಭ್ಯಾಸವು ಕ್ರಮೇಣ ಚಟವಾಗಿ ಬದಲಾಗುತ್ತದೆ. ಅನೇಕ ಮಕ್ಕಳು ಕಾರ್ಟೂನ್ ನೋಡದೆ ಊಟ ಮಾಡುವುದಿಲ್ಲ. ಮಕ್ಕಳಿಗೆ ಕಾರ್ಟೂನ್‌ಗಳನ್ನು ಒಂಟಿಯಾಗಿ ನೋಡಲು ಬಿಡಬಾರದು. ಅವರೊಂದಿಗೆ ನೀವೂ ಕುಳಿತು ಅದು ವರ್ಚುವಲ್ ಜಗತ್ತು, ವಾಸ್ತವಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಬೇಕು. ಯಾವುದೇ ಸೂಪರ್ ಹೀರೋ ನಿಮಗೆ ಸಹಾಯ ಮಾಡಲು ಬರುವುದಿಲ್ಲ. ಹೋಮ್‌ವರ್ಕ್, ಪರೀಕ್ಷೆ ಬರೆಯಲು ಬರುವುದಿಲ್ಲ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಬೇಕು.
ಮಕ್ಕಳ ಸ್ಕ್ರೀನ್ ಟೈಮ್ ಕಡಿಮೆ ಮಾಡುವುದು ಪೋಷಕರ ಜವಾಬ್ಧಾರಿ. ಟಿವಿ, ಮೊಬೈಲ್, ಲ್ಯಾಪ್ಟಾಪ್ ವೀಕ್ಷಣೆ ಮಕ್ಕಳ ಕಣ್ಣುಗಳಿಗೆ ಮಾರಕವಾಗುತ್ತದೆ. ಕೆಲವು ಕಾರ್ಟೂನ್‌ಗಳು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅವರು ವರ್ಚುವಲ್ ಜಗತ್ತಿನಲ್ಲಿ ಬದುಕಲು ಒಗ್ಗಿಕೊಳ್ಳಬಹುದು. ಕೆಲವು ಮಕ್ಕಳು ಜಗಳ ಅಥವಾ ಸ್ಟಂಟ್ ನೋಡಿದ ನಂತರ ಹಿಂಸಾತ್ಮಕರಾಗಬಹುದು. ಇದು ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಮಕ್ಕಳನ್ನು ಕಾರ್ಟೂನ್ ಚಟದಿಂದ ಮುಕ್ತಗೊಳಿಸಿ.