ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ವೇಳೆ ಕೆಲವೊಮ್ಮೆ ಹರಿದ ನೋಟು ಬರುತ್ತದೆ. ಎಟಿಎಂನಿಂದ ಹರಿದು ನೋಟು ಬಂದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಮಾರುಕಟ್ಟೆಯಲ್ಲಿ ಈ ನೋಟು ಚಲಾವಣೆಯಾಗ್ತಿಲ್ಲ ಎಂದಾದ್ರೆ ಅದನ್ನು ಸುಲಭವಾಗಿ ಬದಲಾಯಿಸಬಹುದು.
ಎಟಿಎಂನಿಂದ ಹರಿದ ನೋಟು ಬರುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದ ನಂತ್ರ ರಿಸರ್ವ್ ಬ್ಯಾಂಕ್ ಜನರಿಗೆ ವಿಶೇಷ ಸೌಲಭ್ಯ ಕಲ್ಪಿಸಿದೆ. ಎಟಿಎಂನಿಂದ ಯಾವುದೇ ಹರಿದ ನೋಟು ಬಂದರೆ ಮೊದಲು ಯಾವ ಬ್ಯಾಂಕ್ ಎಟಿಎಂನಿಂದ ಈ ನೋಟು ಬಂದಿದೆಯೋ ಆ ಬ್ಯಾಂಕ್ ಸಂಪರ್ಕಿಸಿ. ಬ್ಯಾಂಕ್ ಫಾರ್ಮ್ ನೀಡುತ್ತದೆ. ಆ ಫಾರ್ಮ್ ತುಂಬಬೇಕು. ಹಣ ವಿತ್ ಡ್ರಾ ಮಾಡಿದ ದಿನಾಂಕ, ಸಮಯ ಯಾವುದು ಎಂಬ ವಿವರ ನೀಡಬೇಕು. ಒಂದು ವೇಳೆ ಎಟಿಎಂ ಸ್ಲಿಪ್ ಇದ್ದಲ್ಲಿ ಅದನ್ನು ಅರ್ಜಿಗೆ ಲಗತ್ತಿಸಿ. ಒಂದು ವೇಳೆ ಸ್ಲಿಪ್ ಇಲ್ಲವೆಂದಾದ್ರೆ ಮೊಬೈಲ್ ನಲ್ಲಿ ಬಂದ ಮಾಹಿತಿಯನ್ನು ದಾಖಲೆ ರೂಪದಲ್ಲಿ ನೀಡಿ.
ಈ ಅರ್ಜಿಯನ್ನು ಸಲ್ಲಿಸಿದ ತಕ್ಷಣ, ಬ್ಯಾಂಕ್ ಅಧಿಕಾರಿಗಳು ನಿಮ್ಮ ಖಾತೆಯ ವಿವರಗಳನ್ನು ಪರಿಶೀಲಿಸುತ್ತಾರೆ. ಎಲ್ಲವೂ ಸರಿಯಾಗಿದ್ದರೆ ಹರಿದ ನೋಟುಗಳನ್ನು ತೆಗೆದುಕೊಂಡು ಹೊಸ ನೋಟುಗಳನ್ನು ನೀಡ್ತಾರೆ. ಈ ಪ್ರಕ್ರಿಯೆಗೆ ಕೆಲವೇ ನಿಮಿಷಗಳು ಸಾಕಾಗುತ್ತದೆ.
ಹರಿದ ನೋಟುಗಳನ್ನು ನೇರವಾಗಿ ಬ್ಯಾಂಕ್ ಗೆ ತೆಗೆದುಕೊಂಡು ಹೋಗಿ ಬದಲಿಸಬಹುದು. ಒಂದು ವೇಳೆ ಬ್ಯಾಂಕ್, ನೋಟುಗಳನ್ನು ವಾಪಸ್ ಪಡೆಯಲು ನಿರಾಕರಿಸಿದ್ರೆ ರಿಸರ್ವ್ ಬ್ಯಾಂಕಿನ ಎಕ್ಸ್ಚೇಂಜ್ ಕರೆನ್ಸಿ ರೂಲ್ಸ್ 2017 ರ ಪ್ರಕಾರ, ಬ್ಯಾಂಕುಗಳಿಗೆ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ.