ಬದಲಾದ ಜೀವನ ಶೈಲಿ, ಕೆಲಸದ ವಿಧಾನಗಳಿಂದ ಒತ್ತಡ, ಚಿಂತೆ ಹೆಚ್ಚಾಗಿಬಿಟ್ಟಿದೆ. ಟೈಮೇ ಇಲ್ಲ, ಹಿಡಿದ ಕೆಲಸ ಪೂರ್ಣಗೊಳಿಸಲು ಆಗುತ್ತಿಲ್ಲ ಎಂದು ಹೆಚ್ಚಿನವರು ಹೇಳುವುದನ್ನು ಕೇಳಿರುತ್ತೀರಿ.
ಅಷ್ಟಕ್ಕೂ ಅವರಿಗೆ ಕೆಲಸ ಪೂರ್ಣಗೊಳಿಸಲು ಸಮಯವಿಲ್ಲ ಎನ್ನುವುದಕ್ಕಿಂತ ಅವರಿಗೆ ಕೆಲಸದ ಬಗ್ಗೆ ಮಾಹಿತಿ ಇರುವುದಿಲ್ಲ. ಕೆಲಸದ ಬಗ್ಗೆ ತಿಳಿದುಕೊಳ್ಳದೇ ಆರಂಭಿಸಿದ ಕಾರಣ ಪೂರ್ಣಗೊಳಿಸಲು ಸಮಯ ಬೇಕಾಗುತ್ತದೆ. ಇದರಿಂದಾಗಿ ಒತ್ತಡ, ಚಿಂತೆ ಜಾಸ್ತಿಯಾಗುತ್ತದೆ.
ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ಅದರ ಬಗ್ಗೆ ತಿಳಿದುಕೊಂಡಿರಬೇಕು. ಕೆಲಸದ ಬಗ್ಗೆ ಅರಿವು, ಕೌಶಲ್ಯವನ್ನು ಹೊಂದಿದ್ದಾಗ, ಒತ್ತಡವಿಲ್ಲದೇ ಒಪ್ಪಿಕೊಂಡ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಿದೆ.
ಇನ್ನು ಅತಿಯಾದ ನಿರೀಕ್ಷೆ ಒಳ್ಳೆಯದಲ್ಲ. ಶಕ್ತಿಯನ್ನು ಮೀರಿ ಕೆಲಸ ಮಾಡಲು ಪ್ರಯತ್ನಿಸಿದರೆ, ಗೊತ್ತಿಲ್ಲದ ವಿಷಯಗಳಾದರೆ, ಒತ್ತಡವಾಗುತ್ತದೆ. ಇನ್ನು ಕೆಲವರು ಒಂದೇ ಸಮಯಕ್ಕೆ 4 -5 ಕೆಲಸಗಳನ್ನು ಮಾಡುವ ಪ್ರಯತ್ನ ನಡೆಸುತ್ತಾರೆ. ಅದರಿಂದ ಒತ್ತಡ ಜಾಸ್ತಿಯಾಗಿ ಹಿನ್ನಡೆಯಾಗುವ ಸಾಧ್ಯತೆ ಇರುತ್ತದೆ.
ಕೆಲಸದ ಮೇಲೆ ಹೆಚ್ಚು ನಿಗಾ ವಹಿಸಲು ಸಾಧ್ಯವಾಗುವುದಿಲ್ಲ. ಒಂದೊಂದೇ ಕೆಲಸವನ್ನು ಪೂರ್ಣಗೊಳಿಸಿದಲ್ಲಿ ಅನುಕೂಲವಾಗುತ್ತದೆ. ಧೈರ್ಯ, ಆತ್ಮ ವಿಶ್ವಾಸ ಹಾಗೂ ನೀವು ಕೈಗೊಳ್ಳಬೇಕಿರುವ ಕೆಲಸಗಳ ಬಗ್ಗೆ ಮಾಹಿತಿ ನಿಮಗೆ ಇದ್ದಲ್ಲಿ ಒತ್ತಡ, ಚಿಂತೆ ಇರೋದೇ ಇಲ್ಲ ಎನ್ನುವುದು ತಿಳಿದವರ ಅಭಿಪ್ರಾಯವಾಗಿದೆ.