ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಉಂಟಾದ ಕೋವಿಡ್ ಸಾವುಗಳ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದಲ್ಲಿ ದೆಹಲಿ ಸರ್ಕಾರಕ್ಕೆ ಸಮಿತಿ ರಚನೆ ಮಾಡಲಿದೆ ಎಂದು ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ತನ್ನ ತಪ್ಪನ್ನು ಮರೆಮಾಚಲು ಯತ್ನಿಸುತ್ತಿದೆ. ಏಪ್ರಿಲ್ 13ರ ನಂತರ ವೈದ್ಯಕೀಯ ಆಮ್ಲಜನಕದ ವಿತರಣೆ ನೀತಿಯಲ್ಲಿ ಬದಲಾವಣೆ ಮಾಡಿದ್ದೇ ದೇಶದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಗೆ ಕಾರಣವಾಯ್ತು. ಇದರಿಂದಾಗಿ ಕೊರೊನಾ ಎರಡನೆ ಅಲೆಯಲ್ಲಿ ಅನಾಹುತಗಳೇ ನಡೆದು ಹೋಗಿವೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
ಕೊರೊನಾ 2ನೇ ಅಲೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದವರ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದ್ದರೂ ಸಹ ಕೇಂದ್ರ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಸರ್ಕಾರವು ಕಿಂಚಿತ್ತೂ ನಾಚಿಕೆ ತೋರದೇ ಸಂಸತ್ತಿನಲ್ಲಿ ಈ ಸಂಬಂಧ ಸುಳ್ಳು ಹೇಳಿದೆ. ಏಪ್ರಿಲ್ 15ರಿಂದ ಮೇ 05ರವರೆಗೆ ದೇಶದಲ್ಲಿ ಉಂಟಾದ ಆಮ್ಲಜನಕ ಕೊರತೆಯೇ ಈ ಎಲ್ಲಾ ಅನಾಹುತಗಳಿಗೆ ನೇರ ಕಾರಣ ಎಂದು ಸಿಸೋಡಿಯಾ ಗುಡುಗಿದ್ದಾರೆ.