ಬೆಂಗಳೂರು: ರಾಜ್ಯದ ಕೆಲವು ಸಚಿವರ ಜಿಲ್ಲಾ ಉಸ್ತುವಾರಿಯ ಬದಲಾವಣೆಗೆ ಮಹೂರ್ತ ನಿಗದಿಯಾಗಿದೆ. ಕೆಲವು ಸಚಿವರ ಅಪೇಕ್ಷೆಯಂತೆ ಈ ಬದಲಾವಣೆ ನಡೆದಿದ್ದು, ಮತ್ತೆ ಕೆಲವರನ್ನು ಪಕ್ಷದ ಜಿಲ್ಲಾ ಮುಖಂಡರ ವಿರೋಧ ಮತ್ತು ಚುನಾವಣೆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸದ ಕಾರಣಕ್ಕೆ ಬದಲಾಯಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಶೀಘ್ರದಲ್ಲಿಯೇ ಪರಿಷ್ಕೃತ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಹೊರ ಬೀಳುವ ಸಾಧ್ಯತೆ ಇದ್ದು, ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ನಡೆದಿರುವ ಈ ಬದಲಾವಣೆ ಭಾರಿ ಮಹತ್ವ ಪಡೆದುಕೊಂಡಿದೆ.
ಪಕ್ಷದ ಜಿಲ್ಲಾ ಮುಖಂಡರ ವಿರೋಧ, ಕಾರ್ಯಕರ್ತರೊಂದಿಗೆ ಹೊಂದಾಣಿಕೆ ಕೊರತೆ, ಚುನಾವಣೆ ಜವಾಬ್ದಾರಿಯ ನಿರ್ವಹಣೆ ವೈಫಲ್ಯ ಮೊದಲಾದ ಕಾರಣಗಳಿಂದ ಕೆಲವು ಸಚಿವರ ಉಸ್ತುವಾರಿ ಬದಲಾಯಿಸಲಾಗುತ್ತಿದೆ. ಕನಿಷ್ಠ 6-7 ಮಂದಿ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ನಿರ್ಧರಿಸಲಾಗಿದೆ. ಕೆಲವು ಸಚಿವರ ಅಪೇಕ್ಷೆ ಮೇರೆಗೆ ಕೂಡ ಈ ಬದಲಾವಣೆ ನಡೆದಿದೆ. ಶೀಘ್ರದಲ್ಲೇ ಪರಿಷ್ಕೃತ ಆದೇಶ ಹೊರ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಎನ್.ಎಸ್. ಬೋಸರಾಜು ಕೊಡಗು ಜಿಲ್ಲಾ ಉಸ್ತುವಾರಿಯಿಂದ ಬಿಡುಗಡೆ ಬಯಸಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲಾ ಉಸ್ತುವಾರಿ ಬಯಸಿದ್ದಾರೆ. ಸಚಿವ ನಾಗೇಂದ್ರ ರಾಜೀನಾಮೆಯಿಂದ ತೆರವಾದ ಬಳ್ಳಾರಿ ಉಸ್ತುವಾರಿ ಮೇಲೆ ಬೋಸರಾಜು ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ನಿರ್ವಹಿಸುತ್ತಿದ್ದ ಡಾ.ಹೆಚ್.ಸಿ. ಮಹದೇವಪ್ಪ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಬಯಸಿದ್ದು, ಕೆ. ವೆಂಕಟೇಶ್ ಅವರಿಗೆ ಮೈಸೂರು ಉಸ್ತುವಾರಿ ನೀಡುವ ಸಾಧ್ಯತೆ ಇದೆ. ದಿನೇಶ್ ಗುಂಡೂರಾವ್ ಅವರಿಗೆ ದಕ್ಷಿಣ ಕನ್ನಡ ಬದಲು ಕೊಡಗು ಜಿಲ್ಲಾ ಉಸ್ತುವಾರಿ ನೀಡುವ ಸಾಧ್ಯತೆ ಇದೆ.
ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ ಜಿಲ್ಲೆ ಬದಲು ಬೇರೆ ಜಿಲ್ಲೆಯ ಉಸ್ತುವಾರಿ ನೀಡುವ ಸಾಧ್ಯತೆ ಇದೆ. ಕೆ.ಎನ್. ರಾಜಣ್ಣ ಹಾಸನ ಜಿಲ್ಲಾ ಉಸ್ತುವಾರಿ ಬದಲಿಗೆ ಬೇರೆ ಜಿಲ್ಲೆ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.