ಶಿವಮೊಗ್ಗ: ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳ ಸಾಧನೆಯ ಕುರಿತು ರಾಜಕೀಯ ನಾಯಕರಲ್ಲಿ ಕ್ರೆಡಿಟ್ ವಾರ್ ಶುರುವಾಗಿದೆ. ಕಾಂಗ್ರೆಸ್-ಬಿಜೆಪಿ ನಾಯಕರು ಈ ವಿಚಾರವಾಗಿ ಪೈಪೋಟಿ ಆರಂಭಿಸಿದ್ದಾರೆ.
ಈ ನಡುವೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಇದರಲ್ಲಿ ಕ್ರೆಡಿಟ್ ತೆಗೆದುಕೊಳ್ಳುವುದು ಏನೂ ಇಲ್ಲ. ನಮ್ಮ ವಿಜ್ಞಾನಿಗಳು ವಿಶ್ವವೇ ನಿಬ್ಬೆರಗಾಗುವ ಸಾಧನೆ ಮಾಡಿದ್ದಾರೆ. ಶ್ರೆಯಸ್ಸೆಲ್ಲ ಅವರಿಗೆ ಸಲ್ಲಬೇಕು ಎಂದು ತಿಳಿಸಿದ್ದಾರೆ.
ಇಸ್ರೋ ವಿಜ್ಞಾನಿಗಳ ಬೆನ್ನುತಟ್ಟಿ ಅಭಿನಂದಿಸಲು ಇಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಿದ್ದರು. ಅವರು ಎಲ್ಲಿಯೂ ಬಿಜೆಪಿಗೆ ಕ್ರೆಡಿಟ್ ಸಲ್ಲಬೇಕು ಎಂದಿಲ್ಲ. ಕಾಂಗ್ರೆಸ್ ನಾಯಕರಿಗೆ ಪ್ರತಿ ವಿಷಯದಲ್ಲೂ ರಾಜಕಾರಣ ಮಾಡೋದು ಅಭ್ಯಾಸ. ಅತಿ ಕಡಿಮೆ ವೆಚ್ಚದಲ್ಲಿ ಚಂದ್ರಯಾನ-3 ಸಾಕಾರಗೊಂಡಿದೆ. ಈ ಮಿಶನ್ ಗೆ ಭಾರತ ಖರ್ಚು ಮಾಡಿದ್ದು 615 ಕೋಟಿ. ಆದರೆ ರಷ್ಯಾ 1700 ಕೋಟಿ ಖರ್ಚು ಮಾಡಿದರೂ ಯಶಸ್ಸು ಕಾಣಲಿಲ್ಲ. ಮಗ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಾಗ ತಂದೆ ಅವನಿಗೆ ಸ್ವೀಟ್ ತಂದು ತಿನ್ನಿಸುತ್ತಾನೆ. ಸ್ವೀಟ್ ಗೆ ಯಾಕೆ ಖರ್ಚು ಮಾಡಿದೆ ಅಂತ ಕೇಳುವ ಮುಠ್ಠಾಳತನವನ್ನು ಕೇವಲ ಕಾಂಗ್ರೆಸ್ ನಾಯಕರು ಮಾತ್ರ ಪ್ರದರ್ಶಿಸುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.