ಆಗಸ್ಟ್ 23ರ ಬುಧವಾರ ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ದಿನವಾಗಿದ್ದು, ಇಸ್ರೋ ವಿಜ್ಞಾನಿಗಳು ಚಂದ್ರನ ದಕ್ಷಿಣ ಅಂಗಳದಲ್ಲಿ ಪ್ರಜ್ಞಾನ್ ರೋವರ್ ಅನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡಿದ್ದಾರೆ. ಭಾರತದ ಈ ಸಾಧನೆಗೆ ಇಡೀ ವಿಶ್ವವೇ ಬೆರಗಾಗಿದ್ದು, ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಭಾರತವು ಈ ಮೂಲಕ ಅಮೆರಿಕ, ರಷ್ಯಾ, ಚೀನಾದ ಬಳಿಕ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಸ್ರೋ ವಿಜ್ಞಾನಿಗಳ ಈ ಮಹತ್ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.
ಇದರ ಜೊತೆಗೆ ಜನತೆಯೂ ಸಹ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಸಂಭ್ರಮಿಸುತ್ತಿದ್ದು, ವಿಶಿಷ್ಟ ರೀತಿಯಲ್ಲಿ ನಮನ ಸಲ್ಲಿಸುತ್ತಿದ್ದಾರೆ. ಹೀಗೆ ಬಾಗಲಕೋಟೆಯ ಆಯುರ್ವೇದ ವೈದ್ಯ ಡಾ. ಪವನ್ ಕುಲಕರ್ಣಿ, ಸಂಜೆ ತಮ್ಮ ಕ್ಲಿನಿಕ್ ಗೆ ಚಿಕಿತ್ಸೆಗಾಗಿ ಬಂದ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿ ಚಂದ್ರಯಾನ 3 ಯಶಸ್ಸನ್ನು ಆಚರಿಸಿದ್ದಾರೆ.
ಅವರು ಈಗಾಗಲೇ ಸ್ವಾತಂತ್ರ್ಯ ಹೋರಾಟಗಾರರು, ಯೋಧರು, ವಿಶೇಷ ಚೇತನರಿಗಾಗಿ ಉಚಿತ ಚಿಕಿತ್ಸಾ ಸೇವೆಯನ್ನು ಒದಗಿಸುತ್ತಿದ್ದು, ಇದೀಗ ಚಂದ್ರಯಾನ 3 ಯಶಸ್ವಿಯಾದ ಹಿನ್ನೆಲೆಯಲ್ಲಿ ಅಂದು ಎಲ್ಲ ರೋಗಿಗಳಿಗೂ ಉಚಿತ ಚಿಕಿತ್ಸೆ ನೀಡಿದ್ದಾರೆ.