‘ಚಂದ್ರಯಾನ-3’ ಸಕ್ಸಸ್ ಗೆ ಕಾರಣರಾದ ಇಸ್ರೋ ವಿಜ್ಞಾನಿಗಳ ಐತಿಹಾಸಿಕ ಸಾಧನೆಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಪ್ರಧಾನಿ ಮೋದಿ ಗ್ರೀಸ್ ನಲ್ಲೂ ಚಂದ್ರಯಾನ-3 ಯಶಸ್ವಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು, ಗ್ರೀಸ್ ನಲ್ಲೂ ಇಸ್ರೋ ವಿಜ್ಞಾನಿಗಳ ಗುಣಗಾನ ಮಾಡಿದ್ದಾರೆ.
ಹೌದು. ಗ್ರೀಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಗ್ರೀಸ್ ಅಧ್ಯಕ್ಷ ಕ್ಯಾಟರಿನಾ ಸಕೆಲ್ಲಾರೊಪೌಲೌ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಯಾನ -3 ಮಿಷನ್ ನ ಯಶಸ್ಸನ್ನು ಶ್ಲಾಘಿಸಿದರು. ಮತ್ತು ವಿಜ್ಞಾನಕ್ಕೆ ಅದರ ಅರ್ಥವನ್ನು ಎತ್ತಿ ತೋರಿಸಿದರು. “ಚಂದ್ರಯಾನ -3 ರ ಯಶಸ್ಸು ಭಾರತಕ್ಕೆ ಮಾತ್ರವಲ್ಲ, ಇದು ಇಡೀ ಮಾನವಕುಲದ ಯಶಸ್ಸು… ಚಂದ್ರಯಾನ -3 ಮಿಷನ್ ಸಂಗ್ರಹಿಸಿದ ದತ್ತಾಂಶದ ಫಲಿತಾಂಶಗಳು ಇಡೀ ವೈಜ್ಞಾನಿಕ ಭ್ರಾತೃತ್ವ ಮತ್ತು ಮಾನವಕುಲಕ್ಕೆ ಸಹಾಯ ಮಾಡುತ್ತದೆ”. ಇಂತಹ ಅಭೂತಪೂರ್ವ ಸಾಧನೆಯನ್ನು ವಿಜ್ಞಾನಿಗಳು ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
ಪ್ರಧಾನಿ ಮೋದಿ ಇಂದು ‘ಗ್ರೀಸ್’ ಗೆ ಭೇಟಿ ನೀಡಿದ್ದು, ಪ್ರಧಾನಿ ಮೋದಿಗೆ ಅಲ್ಲಿನ ಭಾರತೀಯರು ಅದ್ದೂರಿ ಸ್ವಾಗತ ಕೋರಿದ್ದಾರೆ. ಪ್ರಧಾನಮಂತ್ರಿ ಮೋದಿ ಅವರಿಗೆ ಅಥೆನ್ಸ್ ನಲ್ಲಿ ಗ್ರೀಸ್ ಅಧ್ಯಕ್ಷ ಕ್ಯಾಟರಿನಾ ಸಕೆಲ್ಲಾರೊಪೌಲೌ ಅವರು ಔಪಚಾರಿಕ ಸ್ವಾಗತ ನೀಡಿದರು. ಇಬ್ಬರೂ ನಾಯಕರು ಗ್ರೀಸ್ ಅಧ್ಯಕ್ಷರ ನಿವಾಸದಲ್ಲಿ ಪ್ರಮುಖ ಮಾತುಕತೆ ನಡೆಸಿದರು.
ಪ್ರಧಾನಿ ಮೋದಿಗೆ ಗ್ರೀಸ್ ದೇಶದ ಅತ್ಯುನ್ನತ ಗೌರವ; ಗ್ರ್ಯಾಂಡ್ ಕ್ರಾಸ್ ಆಫ್ ಆರ್ಡರ್ ಪ್ರಶಸ್ತಿ ಪ್ರದಾನ
ಗ್ರೀಸ್ ದೇಶದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
40 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಗ್ರೀಸ್ ಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಗ್ರೀಸ್ ದೇಶದ ಅತ್ಯುನ್ನತ ಗೌರವ ’ಗ್ರ್ಯಾಂಡ್ ಕ್ರಾಸ್ ಆಫ್ ಆರ್ಡರ್ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಗ್ರೀಸ್ ಅಧ್ಯಕ್ಷೆ ಕಟೇರಿನಾ ಈ ಗೌರವವನ್ನು ಪ್ರದಾನ ಮಾಡಿದರು.