ಬುಧವಾರ ನಿನ್ನೆ ಭಾರತ ಚಂದ್ರಯಾನ – 3 ರ ಅಭೂತಪೂರ್ವ ಯಶಸ್ಸು ಸಾಧಿಸಿದ್ದು, ಭಾರತ ಮಾತ್ರವಲ್ಲದೆ ವಿಶ್ವದ ಮೂಲೆ ಮೂಲೆಗಳಿಂದ ಅಭಿನಂದನೆಗಳ ಸುರಿಮಳೆಯೇ ಹರಿದು ಬಂದಿದೆ.
ಭಾರತದ ಇಸ್ರೋ ವಿಜ್ಞಾನಿಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದು, ಇಡೀ ವಿಶ್ವವೇ ಈಗ ಭಾರತದತ್ತ ಬೆರಗುಗಣ್ಣಿನಿಂದ ನೋಡುತ್ತಿದೆ.ಈ ಹಿನ್ನೆಲೆ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಆಗಸ್ಟ್ 26 ರಂದು ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಪೀಣ್ಯದಲ್ಲಿ ಪ್ರಧಾನಿ ಮೋದಿ ಸುಮಾರು 1.ಕಿಮಿ ರೋಡ್ ಶೋ ನಡೆಸಲಿದ್ದಾರೆ ಅಲ್ಲದೇ ಏರ್ ಪೋರ್ಟ್ ನಲ್ಲಿ ಪ್ರಧಾನಿ ಮೋದಿ ಭಾಷಣ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸ್ವಾಗತಕ್ಕೆ ಎಚ್ಎಎಲ್ ಏರ್ಪೋರ್ಟ್ನಲ್ಲಿ 5-6 ಸಾವಿರ ಜನರನ್ನು ಸೇರಿಸಲು ಉದ್ದೇಶಿಸಲಾಗಿದೆ. ಮೋದಿ ಅವರು ಏರ್ಪೋರ್ಟ್ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಬಗ್ಗೆ ಸಿದ್ದತೆ ಮಾಡಿಕೊಳ್ಳುವಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಬಿಜೆಪಿ ಶಾಸಕರಿಗೆ ಸೂಚನೆ ನೀಡಿದ್ದಾರೆ. ಏರ್ ಪೋರ್ಟ್ ನಲ್ಲಿ ಜನರನ್ನು ಸೇರಿಸುವುದು ಸೇರಿದಂತೆ ಪ್ರಧಾನಿ ಮೋದಿ ರೋಡ್ ಶೋ ಗೆ ಸಂಬಂಧಪಟ್ಟ ಎಲ್ಲಾ ಸಿದ್ದತೆಗಳನ್ನು ನೋಡಿಕೊಳ್ಳುವಂತೆ ಬಿಜೆಪಿ ಶಾಸಕರಿಗೆ ಸೂಚನೆ ನೀಡಿದ್ದಾರೆ.
ಚಂದ್ರಯಾನ -3 ಲ್ಯಾಂಡರ್ ಮಾಡ್ಯೂಲ್ ಬುಧವಾರ ಸಂಜೆ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸಿದೆ, ಈ ಐತಿಹಾಸಿಕ ಸಾಧನೆ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದಾರೆ. “ನವ ಭಾರತದ ಹೊಸ ಹಾರಾಟಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಹೊಸ ಇತಿಹಾಸ ಬರೆಯಲಾಗಿದೆ. ಇದು ಎಂದೆಂದಿಗೂ ನೆನಪಿನಲ್ಲಿ ಉಳಿಯುವ ಕ್ಷಣ. ಭಾರತ ಈಗ ಚಂದ್ರನ ಮೇಲೆ ಇದೆ” ಎಂದು ಪಿಎಂ ಮೋದಿ ಆರಂಭಿಕ ಹೇಳಿಕೆಯಲ್ಲಿ ಹೇಳಿದರು.