ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಚಂದ್ರಯಾನ-3 ಆಗಸ್ಟ್ 23 ರಂದು ಚಂದ್ರಯಾನವನ್ನು ಪೂರ್ಣಗೊಳಿಸಿದೆ. ಅದರ ವಿಕ್ರಮ್ ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸಂಜೆ 6.04 ಕ್ಕೆ ಇಳಿಯಿತು.
ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನದ ವಿಕ್ರಮ್ ಲ್ಯಾಂಡರ್ ಯಶಸ್ವಿ ಲ್ಯಾಂಡಿಂಗ್ ಕುರಿತು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.
ಇಸ್ರೋವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿಜ್ಞಾನಿಗಳನ್ನು ಅಭಿನಂದಿಸಿ ಈ ಹಿಂದೆ ಯಾವುದೇ ದೇಶವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿಲ್ಲ. ನಮ್ಮ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ನಾವು ಅಲ್ಲಿಗೆ ತಲುಪಿದ್ದೇವೆ. ಭಾರತದ ಯಶಸ್ವಿ ಚಂದ್ರಯಾನ ಕೇವಲ ಭಾರತ ಮಾತ್ರವಲ್ಲ… ಈ ಯಶಸ್ಸು ಎಲ್ಲ ಮಾನವೀಯತೆಗೂ ಸೇರಿದೆ ಎಂದು ಹೇಳಿದ್ದಾರೆ.
ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವುದು ನವಭಾರತದ ಉದಯವಾಗಿದೆ. ಇಂತಹ ಐತಿಹಾಸಿಕ ಕ್ಷಣಗಳನ್ನು ನೋಡಿದಾಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಇದು ನವ ಭಾರತದ ಉದಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು…ನಮ್ಮ ವೈಫಲ್ಯದಿಂದ ನಾವು ಬಹಳಷ್ಟು ಕಲಿತಿದ್ದೇವೆ ಮತ್ತು ಇಂದು ನಾವು ಯಶಸ್ವಿಯಾಗಿದ್ದೇವೆ. ಚಂದ್ರಯಾನ-3 ಗಾಗಿ ನಾವು ಮುಂದಿನ 14 ದಿನಗಳನ್ನು ಎದುರು ನೋಡುತ್ತಿದ್ದೇವೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ.
ಇಸ್ರೋದ ಮೂರನೇ ಚಂದ್ರಯಾನ ಚಂದ್ರಯಾನ-3 ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ್ದಕ್ಕಾಗಿ ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್ ಅಭಿನಂದಿಸಿದ್ದಾರೆ. ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ… ಈ ಕ್ಷಣಕ್ಕಾಗಿ ನಾವು ಬಹಳ ಸಮಯದಿಂದ ಕಾಯುತ್ತಿದ್ದೇವೆ. ನನಗೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದರು.