ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಅವರ ಕೊಲೆ ಬಳಿಕ ಪೊಲೀಸರಿಗೆ ಹಂತಕರೇ ಖುದ್ದಾಗಿ ಮಾಹಿತಿ ನೀಡಿದ್ದಾರೆ. ಮಾಧ್ಯಮಗಳಲ್ಲಿ ಹತ್ಯೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ಆರೋಪಿಗಳೇ ಪೊಲೀಸರಿಗೆ ಕರೆ ಮಾಡಿದ್ದಾರೆನ್ನಲಾಗಿದೆ.
ಹುಬ್ಬಳ್ಳಿ ಪೊಲೀಸರಿಗೆ ಕೊಲೆ ಆರೋಪಿಗಳು ಖುದ್ದಾಗಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬೆಳಗಾವಿಯ ಕಡೆಗೆ ಹೋಗುತ್ತಿದ್ದೇವೆ ಎಂದು ತಾವೇ ಮಾಹಿತಿ ನೀಡಿದ್ದು, ಕೂಡಲೇ ಬೆಳಗಾವಿ ಜಿಲ್ಲೆ ಪೊಲೀಸರಿಗೆ ಹುಬ್ಬಳ್ಳಿ ಪೊಲೀಸರು ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿ ಪೊಲೀಸರ ಮಾಹಿತಿಯ ಮೇರೆಗೆ ಎರಡೂ ಜಿಲ್ಲೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಹಾಂತೇಶ್, ಮಂಜುನಾಥ್ ಬಂಧಿತ ಆರೋಪಿಗಳು. ಮಂಜುನಾಥ್ ಹಿಂದೆ ಗುರೂಜಿ ಬಳಿ ಕೆಲಸ ಮಾಡಿದ್ದು, ಆತನಿಗೆ ಗುರೂಜಿ ಸಂಬಳ ನೀಡಿರಲಿಲ್ಲ. ಮಹಾಂತೇಶ್ ಪತ್ನಿ ಹೆಸರಲ್ಲಿ ಗುರೂಜಿ ಅಕ್ರಮವಾಗಿ ಆಸ್ತಿ ಮಾಡಿದ್ದರು. ಅದನ್ನು ವಾಪಸ್ ಕೇಳಿದ್ದರು. ಇದೇ ಕಾರಣಕ್ಕೆ ಕೊಲೆಯಾಗಿದೆ ಎಂದು ಹೇಳಲಾಗಿದೆ.