ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರನ್ನು ಬರ್ಬರವಾಗಿ ಕೊಂದ ಆರೋಪಿಗಳು ಹತ್ಯೆಗೆ ಬಳಸಿದ ಚಾಕು ಸುಮಾರು ಅರ್ಧ ಅಡಿ ಉದ್ದ ನಾಲ್ಕು ಇಂಚು ಅಗಲ ಇದ್ದಿರಬಹುದು ಎಂದು ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಅಂದಾಜಿಸಿದ್ದಾರೆ.
ಸುಮಾರು ಮೂರ್ನಾಲ್ಕು ಇಂಚು ಅಗಲದ ಹರಿತವಾದ ಚಾಕುವಿನಿಂದ ಎರಡು ಬಾರಿ ಕುತ್ತಿಗೆ ಕೊಯ್ದಿದ್ದರಿಂದ 12 ಇಂಚು ಉದ್ದದ ಗಾಯ ಪತ್ತೆಯಾಗಿದೆ. ಇದಲ್ಲದೆ, ಎದೆ, ಹೊಟ್ಟೆ, ಬೆನ್ನು, ಕಾಲು, ತೋಳು ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ 50ಕ್ಕೂ ಹೆಚ್ಚು ಬಾರಿ ಇರಿಯಲಾಗಿದೆ. ಹಂತಕರು ಗುರೂಜಿಯವರಿಗೆ ಹರಿತವಾದ ಚಾಕುವಿನಿಂದ ಚುಚ್ಚಿದ ಜಾಗಗಳಲ್ಲಿಯೇ ಪದೇಪದೇ ಎರಡು ಮೂರು ಬಾರಿ ಚುಚ್ಚಿದ್ದಾರೆ ಎನ್ನುವುದು ಶವ ಪರೀಕ್ಷೆಯಲ್ಲಿ ಗೊತ್ತಾಗಿದೆ ಎನ್ನಲಾಗಿದೆ.
ಹುಬ್ಬಳ್ಳಿಯ ಕಿಮ್ಸ್ ವಿಧಿ ವಿಜ್ಞಾನ ವಿಭಾಗದ ಡಾ. ಸುನಿಲ್ ಬಿರಾದಾರ ನೇತೃತ್ವದ ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ. ಮೂರೂವರೆ ಗಂಟೆಗೂ ಅಧಿಕ ಕಾಲ ಕಿಮ್ಸ್ ಶವಾಗಾರದಲ್ಲಿ ಶವ ಪರೀಕ್ಷೆ ನಡೆಸಲಾಗಿದೆ. ಗುರೂಜಿ ಹತ್ಯೆ ಪ್ರಕರಣ ಅತ್ಯಂತ ಸೂಕ್ಷ್ಮವಾಗಿದ್ದ ಕಾರಣ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಸೂಕ್ಷ್ಮವಾಗಿ ಪರೀಕ್ಷಿಸಲಾಗಿದೆ ಎಂದು ಹೇಳಲಾಗಿದೆ.