
ವಿಜಯವಾಡ: ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಲು ಅರ್ಹರಲ್ಲ ಎಂದು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದಾಳಿ ನಡೆಸಿದ್ದಾರೆ.
ಚಂದ್ರಬಾಬು ನಾಯ್ಡು ಸೇರಿದಂತೆ 13 ಟಿಡಿಪಿ ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಲಾಗಿದೆ. ಈ ವೇಳೆ ಮಾತನಾಡಿದ ಅವರು, ಜಗನ್ ನಾಚಿಕೆ ಇಲ್ಲದವರಂತೆ ಮಾತನಾಡುತ್ತಾರೆ. 14 ವರ್ಷ ಮುಖ್ಯಮಂತ್ರಿ, 12 ವರ್ಷ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ನಾನು ಮೊದಲ ಬಾರಿಗೆ ಇಂತಹ ನಕಲಿ ಮುಖ್ಯಮಂತ್ರಿಯನ್ನು ನೋಡುತ್ತಿದ್ದೇನೆ ಎಂದು ಟೀಕಿಸಿದ್ದಾರೆ.
ಪಂಚಾಯತ್ ರಾಜ್ ಕಾಯ್ದೆ ಮೇಲೆ ಚರ್ಚೆ ನಡೆಸಲು ಬಿಟ್ಟಿಲ್ಲ. ಚರ್ಚೆಗೆ ಅವಕಾಶವನ್ನೇ ನೀಡದೆ ಅಮಾನತು ಆದೇಶ ಪಾಸ್ ಮಾಡಲಾಗಿದೆ. ಚಂಡಮಾರುತದಿಂದ 20 ಲಕ್ಷ ಎಕರೆ ಬೆಳೆ ಹಾನಿಯಾಗಿದ್ದು, ಲಕ್ಷಾಂತರ ರೈತರು ದಿಕ್ಕುತೋಚದ ಸ್ಥಿತಿಯಲ್ಲಿದ್ದಾರೆ. ಇದನ್ನು ಹೇಳಿದರೆ ಜಗನ್ ಗಾಳಿಸುದ್ದಿ ಎಂದು ಹೇಳುತ್ತಾರೆ. ರೈತರ ಕಷ್ಟ ತಿಳಿಯಲು ಪ್ರಯತ್ನಿಸುತ್ತಿಲ್ಲ. ಪ್ರತಿಭಟನೆ ಮಾಡಲು ಅವಕಾಶ ಕೊಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ರೈತರ ಕಷ್ಟ ತಿಳಿಸಲು ಪ್ರತಿಭಟನೆ ಮಾಡಿದ್ದಕ್ಕೆ ನನ್ನನ್ನು ಅಮಾನತು ಮಾಡಿ ಸದನದಿಂದ ಹೊರ ಹಾಕಿದ್ದಾರೆ. ನನ್ನ ಜೀವನದಲ್ಲಿ ಎಂದೂ ಇಂತಹ ಅವಮಾನ ಅನುಭವಿಸಿಲ್ಲ. ಆದರೆ, ನನ್ನ ರಾಜಕೀಯ ಜೀವನ ಇಷ್ಟಕ್ಕೆ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಎಚ್ಚರಿಕೆ ನೀಡಿದ್ದಾರೆ.