ವರ್ಷದ ಕೊನೆಯ ಮತ್ತು ಎರಡನೇ ಚಂದ್ರಗ್ರಹಣ ಇದೇ ನವೆಂಬರ್ 8ರಂದು ಸಂಭವಿಸಲಿದೆ. ನವೆಂಬರ್ 8ರಂದು ಹುಣ್ಣಿಮೆಯಾಗಿದೆ. ಈ ಬಾರಿ ಚಂದ್ರ ಗ್ರಹಣ ಭಾರತದಲ್ಲೂ ಗೋಚರಿಸಲಿದೆ. ಹಾಗಾಗಿ ಭಾರತದಲ್ಲಿ ಸೂತಕದ ಅವಧಿ ಮಾನ್ಯವಾಗಲಿದೆ. ಪುರಾಣಗಳ ಪ್ರಕಾರ, ಚಂದ್ರಗ್ರಹಣ ರಾಹು ಮತ್ತು ಕೇತುಗಳಿಂದ ಉಂಟಾಗುತ್ತದೆ.
ನವೆಂಬರ್ 8ರಂದು ಸಂಜೆ 5 ಗಂಟೆ 32 ನಿಮಿಷಕ್ಕೆ ಚಂದ್ರಗ್ರಹಣ ಸಂಭವಿಸಲಿದೆ. ಸಂಜೆ 6 ಗಂಟೆ 18 ನಿಮಿಷಕ್ಕೆ ಇದು ಮುಕ್ತಾಯವಾಗಲಿದೆ. ಭಾರತದಲ್ಲಿ ಸೂತಕದ ಅವಧಿ ನವೆಂಬರ್ 8 ರಂದು ಬೆಳಿಗ್ಗೆ 9 ಗಂಟೆ 21 ನಿಮಿಷದಿಂದ ಪ್ರಾರಂಭವಾಗಿ ಸಂಜೆ 6 ಗಂಟೆ 18 ನಿಮಿಷ ಕ್ಕೆ ಕೊನೆಗೊಳ್ಳಲಿದೆ.
ಭಾರತದ ಪೂರ್ವ ಭಾಗದಲ್ಲಿ ಚಂದ್ರಗ್ರಹಣ ಕಾಣಿಸಲಿದೆ. ದೇಶದ ಉಳಿದ ಭಾಗದಲ್ಲಿ ಭಾಗಶಃ ಚಂದ್ರಗ್ರಹಣ ಕಾಣಿಸಲಿದೆ. ಭಾರತವನ್ನು ಹೊರತುಪಡಿಸಿ ಈಶಾನ್ಯ ಯುರೋಪ್, ಉತ್ತರ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರ ಮತ್ತು ದಕ್ಷಿಣ ಅಮೆರಿಕಾದ ಹೆಚ್ಚಿನ ಭಾಗಗಳಲ್ಲಿ ಗೋಚರಿಸಲಿದೆ.
ಚಂದ್ರ ಗ್ರಹಣದ ಸಮಯದಲ್ಲಿ ಯಾವುದೇ ದೇವರ ಕೆಲಸವನ್ನು ಮಾಡಬಾರದು. ಪ್ರತಿ ಆಹಾರಕ್ಕೂ ತುಳಸಿ ಎಲೆಯನ್ನು ಹಾಕಬೇಕು. ಗ್ರಹಣದ ಸಮಯದಲ್ಲಿ ಆಹಾರ ಸೇವನೆ ಮಾಡಬಾರದು. ಹಾಗೆಯೇ ನಿದ್ರೆ ಕೂಡ ಮಾಡಬಾರದು. ಗ್ರಹಣ ಮುಗಿದ ಮೇಲೆ ಸ್ನಾನ ಮಾಡಿ ದೇವರ ಪೂಜೆ ಮಾಡಬೇಕೆಂದು ಧರ್ಮ ಗ್ರಂಥಗಳಲ್ಲಿ ಹೇಳಲಾಗಿದೆ. ಗರ್ಭಿಣಿಯರು ಈ ಸಮಯದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎನ್ನಲಾಗುತ್ತದೆ.