ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಸರ್ಕಾರ ಜನರನ್ನು ಬೇಡಿಕೊಳ್ಳುತ್ತಿದ್ದ ಸಂದರ್ಭವೊಂದಿತ್ತು. ಬಳಿಕ ಜನರೇ ಸರತಿ ಸಾಲಲ್ಲಿ ನಿಂತು ಲಸಿಕೆಗಾಗಿ ಪೈಪೋಟಿಯನ್ನೂ ನಡೆಸಿದ್ದರು. ಈಗ ಬೂಸ್ಟರ್ ಡೋಸ್ ಕೊಡಲಾಗುತ್ತಿದೆ. ಕೋವಿಡ್ ಪುನಃ ತೀವ್ರಗೊಳ್ಳುತ್ತಿರುವಂತೆ ಬೂಸ್ಟರ್ ಡೋಸ್‌ಗೆ ಬೇಡಿಕೆ ಹೆಚ್ಚಿದೆ.
ಪಂಜಾಬ್‌ನ ಚಂಡೀಗಢದಲ್ಲಿ ಬೂಸ್ಟರ್ ಡೋಸ್ ಪಡೆಯುವವರ ಸಂಖ್ಯೆ ಮಂದಗತಿಯಲ್ಲಿ ಸಾಗಿರುವುದರಿಂದ ಜನರನ್ನು ಆಕರ್ಷಿಸಲು ವಿಶೇಷ ಆಫರ್ ಪ್ರಕಟಿಸಿರುವ ಪ್ರಸಂಗವೊಂದು ನಡೆದಿದೆ.
ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ ತೆಗೆದುಕೊಳ್ಳುವವರಿಗೆ ಉಚಿತ ಚೋಲೆ ಭತುರೆಯನ್ನು ನೀಡುವುದಾಗಿ ಸಂಜಯ್ ರಾಣಾ ಎಂಬ ಬೀದಿಬದಿ ವ್ಯಾಪಾರಿ ಘೋಷಿಸಿದ್ದಾರೆ.
ಸಂಜಯ್ ರಾಣಾ ಎಂಬ ಬೀದಿ ಬದಿಯ ವ್ಯಾಪಾರಿ, ಸಾರ್ವಜನಿಕರು ಬೂಸ್ಟರ್ ಡೋಸ್ ಪಡೆದುಕೊಳ್ಳಲು ಹೆಚ್ಚಿನವರು ಮುಂದೆ ಬರುತ್ತಿಲ್ಲ. ಈ ಕಾರಣಕ್ಕೆ ಜನರ ಗಮನ ಸೆಳೆಯಲು ಈ ಆಫರ್ ನೀಡಲಾಗಿದೆ ಎಂದು ಹೇಳಿದ್ದಾರೆ.
ಒಂದು ವರ್ಷದ ಹಿಂದೆ ಈ ಬೀದಿಬದಿ ವ್ಯಾಪಾರಿ ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳುವ ಜನರಿಗೆ ಉಚಿತ ಚೋಲೆ ಭತುರೆ ನೀಡಿದರು. ಪ್ರಧಾನಿ ನರೇಂದ್ರ ಮೋದಿಯವರು ಕೂಡ ತಮ್ಮ ಮಾಸಿಕ ಮನ್ ಕಿ ಬಾತ್ ರೇಡಿಯೋ ಪ್ರಸಾರದಲ್ಲಿ ಈ ಸಂಗತಿ ಉಲ್ಲೇಖಿಸಿ ಪ್ರಶಂಸೆ ವ್ಯಕ್ತಪಡಿಸಿದ್ದರು.
ಸಂಜಯ್ ರಾಣಾ ನೀಡುವ ಚೋಲೆ ಭತುರೆಯನ್ನು ಉಚಿತವಾಗಿ ತಿನ್ನಲು ಅದೇ ದಿನ ಲಸಿಕೆ ತೆಗೆದುಕೊಂಡಿದ್ದೀರಿ ಎಂಬುದನ್ನು ತೋರಿಸಬೇಕು. ಲಸಿಕೆ ಪಡೆದ ಮೆಸೇಜ್ ತೋರಿಸಿದ ತಕ್ಷಣ ರುಚಿಕರವಾದ ಚೋಲೆ ಭತುರಾ ನೀಡುತ್ತಾರೆ ಎಂದು ಮೋದಿ ಹೇಳಿದ್ದರು.
ಅವರ ಪ್ರಯತ್ನವನ್ನು ಶ್ಲಾಘಿಸಿದ ಪ್ರಧಾನಿ, ಸಮಾಜದ ಒಳಿತಿಗಾಗಿ ಕೆಲಸ ಮಾಡಲು, ಸೇವಾ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆ ಬೇಕು ಎಂದು ಹೇಳಲಾಗುತ್ತದೆ. ನಮ್ಮ ಸಹೋದರ ಸಂಜಯ್ ಈ ಸತ್ಯವನ್ನು ಸಾಬೀತುಪಡಿಸುತ್ತಿದ್ದಾರೆ ಎಂದಿದ್ದರು.
ಸಂಜಯ್ ರಾಣಾ ಸೈಕಲ್‌ನಲ್ಲಿ ಚೋಲೆ ಭತುರೆಯನ್ನು ಮಾರುತ್ತಾರೆ. ಕಳೆದ 15 ವರ್ಷಗಳಿಂದ ಈ ಉದ್ಯೋಗ ಮಾಡುತ್ತಿದ್ದಾರೆ.