ಪತ್ನಿಯ ನಕಾರಾತ್ಮಕ ಗುಣಗಳನ್ನು ತೋರಿಸುವ ಸಲುವಾಗಿ ಆಕೆಯ ಅನುಮತಿ ಇಲ್ಲದೆಯೇ ಆಕೆಯ ಕಾಲ್ ರೆಕಾರ್ಡ್ ಮಾಡುವುದು ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಪಂಜಾಬ್ನ ಹೈಕೋರ್ಟ್ ಹೇಳಿದೆ. ಈ ಮೂಲಕ ಪತ್ನಿಯ ಕಾಲ್ ರೆಕಾರ್ಡ್ನ್ನು ಸಾಕ್ಷ್ಯ ಎಂದು ಪರಿಗಣಿಸಿದ್ದ, ಕುಟುಂಬ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿದೆ.
ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದ ಮಹಿಳೆಯು ತನ್ನ ಹಾಗೂ ಪತಿಯ ನಡುವೆ ವೈವಾಹಿಕ ಸಂಬಂಧ ಸರಿಯಾಗಿಲ್ಲ ಎಂದು ದೂರಿದ್ದರು.
ಈ ವಿವಾದ ನಡೆಯುತ್ತಿರುವಾಗಲೇ ಬಟಿಂಡಾ ಕೌಟುಂಬಿಕ ನ್ಯಾಯಾಲಯದಲ್ಲಿ ಪತಿಯು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪತಿಯು ತಮ್ಮ ಪತ್ನಿಯ ಕಾಲ್ ರೆಕಾರ್ಡಿಂಗ್ನ್ನು ಸಾಕ್ಷ್ಯದ ರೂಪದಲ್ಲಿ ಪ್ರಸ್ತುತ ಪಡಿಸಿದ್ದರು. ಇದನ್ನು ಕೌಟುಂಬಿಕ ನ್ಯಾಯಾಲಯ ಸಾಕ್ಷ್ಯ ಎಂದು ಪರಿಗಣಿಸಿತ್ತು. ಆದರೆ ಈ ಆದೇಶವನ್ನು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ತಳ್ಳಿ ಹಾಕಿದೆ.
ಕಾಲ್ ರೆಕಾರ್ಡಿಂಗ್ನ್ನು ಪ್ರಸ್ತುತ ಪಡಿಸುವ ಮೂಲಕ ಪತ್ನಿಯು ತಪ್ಪಿತಸ್ಥೆ ಎಂಬುದನ್ನು ಈ ಸಂಭಾಷಣೆಯ ಮೂಲಕ ಸಾಬೀತುಪಡಿಸಲು ಮುಂದಾಗಿದ್ದ ಪತಿಯ ನಡೆ ವಿರುದ್ಧ ಆಶ್ಚರ್ಯ ವ್ಯಕ್ತಪಡಿಸಿದ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್, ಒಬ್ಬ ವ್ಯಕ್ತಿಯ ಖಾಸಗಿತನದ ಹಕ್ಕನ್ನು ಹೇಗೆ ಉಲ್ಲಂಘನೆ ಮಾಡಲು ಸಾಧ್ಯ..? ಎಂದು ಪ್ರಶ್ನೆ ಮಾಡಿದೆ.
ಸಂಗಾತಿಯ ಒಪ್ಪಿಗೆ ಇಲ್ಲದೆಯೇ ಆಕೆಯ ಕಾಲ್ ರೆಕಾರ್ಡ್ನ್ನು ಪರಿಶೀಲಿಸುವುದು ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ. ವಿಚ್ಚೇದನ ಪ್ರಕರಣ ಕುರಿತಂತೆ ಆರು ತಿಂಗಳ ಒಳಗಾಗಿ ನಿರ್ಧಾರ ತೆಗೆದುಕೊಳ್ಳುವಂತೆ ಬಂಟಿಂಡಾ ಕೌಟುಂಬಿಕ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಹಾಗೂ ಫೋನ್ ರೆಕಾರ್ಡಿಂಗ್ನ್ನು ಯಾವುದೇ ಕಾರಣಕ್ಕೂ ಸಾಕ್ಷ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.