ತಾಯಿ ಲಕ್ಷ್ಮಿ ಕೃಪೆ ಸದಾ ನಮ್ಮ ಮೇಲಿರಲಿ ಎಂದು ಎಲ್ಲರೂ ಬಯಸ್ತಾರೆ. ಆದ್ರೆ ಲಕ್ಷ್ಮಿ ಎಲ್ಲರ ಮನೆಯಲ್ಲಿ ನೆಲೆಸೋದಿಲ್ಲ. ಕೆಲವೇ ಕೆಲವು ಮನೆಯಲ್ಲಿ ಯಾವಾಗ್ಲೂ ಲಕ್ಷ್ಮಿ ಆಶೀರ್ವಾದ ಇರುತ್ತದೆ. ಸಂತೋಷ, ಸಮೃದ್ಧಿ ಸದಾ ನೆಲೆಸಿರುತ್ತದೆ. ಆಚಾರ್ಯ ಚಾಣಕ್ಯ ಈ ಬಗ್ಗೆಯೂ ಹೇಳಿದ್ದಾರೆ. ಯಾರ ಮನೆಯಲ್ಲಿ ಲಕ್ಷ್ಮಿ ವಾಸಿಸ್ತಾಳೆ, ಯಾರ ಮೇಲೆ ಲಕ್ಷ್ಮಿ ಕೃಪೆಯಿರುತ್ತದೆ ಎಂಬುದನ್ನು ಚಾಣಕ್ಯ ವಿವರಿಸಿದ್ದಾರೆ.
ಚಾಣಕ್ಯನ ಪ್ರಕಾರ, ಪತಿ –ಪತ್ನಿ ಮಧ್ಯೆ ಪ್ರೀತಿ, ಗೌರವಿರುವ ಮನೆಯಲ್ಲಿ ಲಕ್ಷ್ಮಿ ನೆಲೆ ನಿಲ್ಲುತ್ತಾಳೆ. ದಂಪತಿ ಖುಷಿಯಿಂದಿರುವ ಮನೆ ಲಕ್ಷ್ಮಿಗೆ ಪ್ರಿಯವಾದ ಸ್ಥಳ. ಹಾಗೆಯೇ ಯಾರ ಮನೆಯಲ್ಲಿ ಹಿರಿಯರಿಗೆ ಗೌರವ ಸಿಗುತ್ತದೆಯೋ ಆ ಮನೆಯಲ್ಲೂ ಲಕ್ಷ್ಮಿ ಕೃಪೆಯಿರುತ್ತದೆ. ಮಹಿಳೆಯರನ್ನು ಗೌರವಿಸುವ, ಪ್ರೀತಿಯಿಂದ ಕಾಣುವ ಮನೆ, ಲಕ್ಷ್ಮಿ ವಾಸಸ್ಥಾನ. ಹಾಗಾಗಿ ಪ್ರತಿಯೊಬ್ಬರೂ ಮನೆಯ ಹೆಣ್ಣು ಮಕ್ಕಳನ್ನು ಹಾಗೂ ಪತ್ನಿಯನ್ನು ಗೌರವದಿಂದ ಕಾಣಬೇಕು ಎನ್ನುತ್ತಾರೆ ಚಾಣಕ್ಯ.
ಅನ್ನಪೂರ್ಣೆಗೆ ಗೌರವ ನೀಡುವ ಮನೆ ಲಕ್ಷ್ಮಿ ನೆಲೆಸುವ ಜಾಗವಾಗಿರುತ್ತದೆ. ಆಹಾರಕ್ಕೆ ಗೌರವ ನೀಡುವ, ಅಡುಗೆ ಮನೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ಹಾಗೂ ಸ್ನಾನ ಮಾಡಿ ಅಡುಗೆ ಮನೆ ಪ್ರವೇಶ ಮಾಡುವ ಮನೆಯೆಂದ್ರೆ ಲಕ್ಷ್ಮಿಗೆ ಇಷ್ಟ. ಅನ್ನ – ಆಹಾರವನ್ನು ದೇವರಂತೆ ಕಾಣುವ ಮನೆಯಲ್ಲಿ ಲಕ್ಷ್ಮಿ ಯಾವಾಗ್ಲೂ ನೆಲೆ ನಿಲ್ಲುತ್ತಾಳೆ ಎನ್ನುತ್ತಾರೆ ಚಾಣಕ್ಯ. ಈ ಮನೆಯಲ್ಲಿ ಆಹಾರ ಹಾಗೂ ಹಣಕ್ಕೆ ಎಂದಿಗೂ ಕೊರತೆ ಕಾಣುವುದಿಲ್ಲ.
ಪಂಡಿತರು, ಜ್ಞಾನಿಗಳು, ವಿದ್ವಾಂಸರು, ಮಹಾತ್ಮರು, ಸಾಧು – ಸಂತರನ್ನು ಗೌರವಿಸುವ ಮನೆಯಲ್ಲಿ ಕೂಡ ಹಣಕ್ಕೆ ಕೊರತೆ ಇರುವುದಿಲ್ಲ. ಆ ಮನೆ ಕೂಡ ಲಕ್ಷ್ಮಿ ನೆಲೆಸುವ ಜಾಗವಾಗಿರುತ್ತದೆ. ಇಂಥ ಮನೆಯವರಿಗೆ ಸಂತೋಷ, ಸುಖವನ್ನು ಲಕ್ಷ್ಮಿ ನೀಡ್ತಾಳೆ.