ಒಬ್ಬ ವ್ಯಕ್ತಿ ಯಶಸ್ಸು ಗಳಿಸ್ತಿದ್ದಾನೆ ಅಂದ್ರೆ ಆತನಿಗೆ ಶತ್ರುಗಳು ಹುಟ್ಟಿಕೊಳ್ತಾರೆ. ಕೆಲ ಶತ್ರುಗಳು ನಮಗೆ ಗೊತ್ತಿದ್ರೆ ಮತ್ತೆ ಕೆಲವರು ಗೊತ್ತಿರೋದಿಲ್ಲ. ಆಚಾರ್ಯ ಚಾಣಕ್ಯ ಕೆಲ ಜನರನ್ನು ಎಂದಿಗೂ ನಂಬಬಾರದು ಎಂದಿದ್ದಾರೆ. ಅವರು ಯಾವಾಗ ಬೇಕಾದ್ರೂ ತಮ್ಮ ವರಸೆ ಬದಲಿಸಬಹುದು. ಹಾಗಾಗಿ ಅವರಿಂದ ಜಾಗರೂಕರಾಗಿರಿ ಎಂದು ಚಾಣಕ್ಯ ಹೇಳ್ತಾರೆ. ಚಾಣಕ್ಯ ಪ್ರಕಾರ, ಮೂರು ಜನರಿಂದ ಅಂತರವನ್ನು ಕಾಯ್ದುಕೊಳ್ಳುವುದು ಅವಶ್ಯಕ. ಅವರು ಯಾರು ಗೊತ್ತಾ?
ಚಾಣಕ್ಯ ಪ್ರಕಾರ, ನಿಮ್ಮ ಶತ್ರುವನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಶತ್ರು ಶಾಂತವಾಗಿದ್ದಾನೆ ಎಂದ್ರೆ ಆತ ನಿಮ್ಮ ಸಹವಾಸ ಬಿಟ್ಟಿದ್ದಾನೆ ಎಂದರ್ಥವಲ್ಲ. ಆತನನ್ನು ನೀವು ಹಗುರವಾಗಿ ತೆಗೆದುಕೊಳ್ಳಬಾರದು. ಅವಕಾಶ ಸಿಕ್ಕಾಗ ಅವರು ನಿಮ್ಮ ಮೇಲೆ ದಾಳಿ ಮಾಡಬಹುದು. ಹಾಗಾಗಿ ಎಂದಿಗೂ ಎಚ್ಚರಿಕೆಯಿಂದಿರಿ.
ಚಾಣಕ್ಯ ಪ್ರಕಾರ ರೋಗವನ್ನು ನಿರ್ಲಕ್ಷ್ಯಿಸಬಾರದು. ರೋಗ ವ್ಯಕ್ತಿಯ ಅಗೋಚರ ಶತ್ರು. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಸಮಸ್ಯೆಯಾಗುತ್ತದೆ. ಅನಾರೋಗ್ಯ ವ್ಯಕ್ತಿಯ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಹಾಗಾಗಿ ರೋಗವನ್ನು ನಿರ್ಲಕ್ಷ್ಯಿಸಬಾರದು. ಆರೋಗ್ಯವಂತ ವ್ಯಕ್ತಿ ಮಾತ್ರ ಗುರಿ ತಲುಪಲು ಸಾಧ್ಯ.
ಹಾವು ಮೌನವಾಗಿ ಕುಳಿತಿದೆ ಅಂತ ಅದರ ಬಳಿ ಹೋಗುವ ಸಾಹಸ ಮಾಡಬೇಡಿ ಎನ್ನುತ್ತಾರೆ ಚಾಣಕ್ಯ. ಹಾವಿನ ವರ್ತನೆಯಿಂದ ಅದರ ಶಕ್ತಿಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಹಾವನ್ನು ಎಂದೂ ಕೆಣಕಲು ಹೋಗಬಾರದು. ಹಾವು ಹೊಂಚು ಹಾಕಿ ದಾಳಿ ನಡೆಸುವ ಸಾಧ್ಯತೆಯಿರುತ್ತದೆ. ಹಾಗಾಗಿ ಹಾವಿನ ಸಹವಾಸಕ್ಕೆ ಹೋಗ್ಬೇಡಿ ಎನ್ನುತ್ತಾರೆ ಚಾಣಕ್ಯ.