ಆಚಾರ್ಯ ಚಾಣಕ್ಯ, ಜೀವನಕ್ಕೆ ಬೇಕಾದ ಅನೇಕ ವಿಷ್ಯಗಳನ್ನು ಹೇಳಿದ್ದಾರೆ. ಚಾಣಕ್ಯ ಜೀವನದಲ್ಲಿ ಹೇಗೆ ಯಶಸ್ಸು ಗಳಿಸಬೇಕು ಎಂಬುದನ್ನು ತಿಳಿಸಿದ್ದಾರೆ. ಮನುಷ್ಯ ಅನೇಕ ಬಾರಿ ನಿರ್ಲಕ್ಷ್ಯ ಮಾಡುವ ಮೂಲಕ ದೊಡ್ಡ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ತಾನೆ.
ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರ ತೆಗೆದುಕೊಂಡಾಗ ಸಮಸ್ಯೆ ದೂರವಾಗುತ್ತೆ ಎಂಬುದು ಚಾಣಕ್ಯ ನೀತಿ ಹೇಳಿದೆ. ಪ್ರತಿಯೊಬ್ಬ ಮಹಿಳೆ ಹಾಗೂ ಪುರುಷ ಕೆಲವೊಂದು ವಿಷ್ಯವನ್ನು ತಿಳಿದಿರಬೇಕು ಎನ್ನುತ್ತಾರೆ ಚಾಣಕ್ಯ.
ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿ ಯಾವಾಗಲೂ ಕೆಲವು ಪ್ರಶ್ನೆಗಳಿಗೆ ಉತ್ತರ ತಿಳಿದಿರಬೇಕು. ಸದಾ ಜಾಗೃತವಾಗಿರಬೇಕು. ಪ್ರಸ್ತುತ ಏನಾಗುತ್ತಿದೆ, ನಿಮ್ಮ ಸುತ್ತ ಯಾವ ರೀತಿಯ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ ಎಂಬುದರ ಬಗ್ಗೆ ಎಚ್ಚರವಿರಲಿ. ಸಂತೋಷ ಮತ್ತು ದುಃಖದ ದಿನಗಳ ಪ್ರಕಾರ ನೀವು ತಂತ್ರ ರೂಪಿಸಬೇಕು. ಅದಕ್ಕನುಗುಣವಾಗಿ ನಿಮ್ಮ ನಡವಳಿಕೆ ಮತ್ತು ಕೆಲಸವನ್ನು ಬದಲಿಸಬೇಕು ಎನ್ನುತ್ತಾರೆ ಚಾಣಕ್ಯ.
ಆಚಾರ್ಯರ ಪ್ರಕಾರ, ಜೀವನದಲ್ಲಿ ನಿಜವಾದ ಸ್ನೇಹಿತ ಹೊಂದುವುದು ಬಹಳ ಮುಖ್ಯ. ನಿಜವಾದ ಸ್ನೇಹಿತ ಯಾರು ಎಂದು ತಿಳಿದುಕೊಳ್ಳುವುದು ಕಷ್ಟ. ಸ್ನೇಹಿತರು ಎಷ್ಟು ಇದ್ದಾರೆ ಎನ್ನುವುದಕ್ಕಿಂತ ಸ್ನೇಹಿತರು ಯಾವ ಉದ್ದೇಶಕ್ಕಾಗಿ ಇದ್ದಾರೆ ಎಂಬುದನ್ನು ಅರಿಯಬೇಕು ಎನ್ನುತ್ತಾರೆ ಚಾಣಕ್ಯ.
ಜೀವನದಲ್ಲಿ ಯಶಸ್ವಿಯಾಗಬೇಕೆಂದ್ರೆ ನಾವು ಕೆಲಸ ಮಾಡುವ ಪರಿಸರದ ಬಗ್ಗೆ ಅರಿತಿರಬೇಕು ಎನ್ನುತ್ತಾರೆ ಚಾಣಕ್ಯ. ಸಹೋದ್ಯೋಗಿಗಳ ಬಗ್ಗೆ ಗಮನವಿರಬೇಕು. ಯಾವ ಪರಿಸ್ಥಿತಿಯಲ್ಲಿ ನೀವು ಹೇಗೆ ನಡೆದುಕೊಳ್ಳಬೇಕು ಎಂಬುದು ತಿಳಿದಿರಬೇಕು. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಲು ಸಿದ್ಧರಾಗಿಬೇಕು ಎನ್ನುತ್ತಾರೆ ಚಾಣಕ್ಯ.
ಆದಾಯಕ್ಕೆ ಅನುಗುಣವಾಗಿ ಖರ್ಚು ಮಾಡುವುದ್ರಲ್ಲಿ ಸಂತೋಷ ಅಡಗಿದೆ. ಸುಖಮಯ ಜೀವನಕ್ಕೆ ಸಂಪತ್ತು ಶೇಖರಣೆ ಅಗತ್ಯ. ಆದ್ದರಿಂದ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ ಎನ್ನುತ್ತಾರೆ ಚಾಣಕ್ಯ.