ಮೈಸೂರು: ಚಾಮುಂಡಿ ಬೆಟ್ಟ ಪ್ಲಾಸ್ಟಿಕ್ ಮುಕ್ತ ಮಾಡಲು ಪಣತೊಟ್ಟಿರುವ ಮೈಸೂರು ಅರಣ್ಯ ಇಲಾಖೆ ಸಿಬ್ಬಂದಿಗಳು ಇಂದಿನಿಂದ ಹೊಸ ನಿಯಮ ಜಾರಿಗೆ ತಂದಿದ್ದಾರೆ.
ನಿಯಮ ಉಲ್ಲಂಘನೆ ಮಾಡಿದರೆ ಭಾರಿ ದಂಡ ತೆರಬೇಕಾಗುತ್ತದೆ. ಚಾಮುಂಡಿ ಬೆಟ್ಟಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲು ಭಕ್ತರು ಆಗಮಿಸುತ್ತಾರೆ. ಅಲ್ಲದೇ ಶ್ರಾವಣ ಮಾಸ ಆರಂಭವಾಗಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಭಕ್ತರು ತಿನ್ನುವ ತಿಂಡಿ ಕವರ್, ಪೊಟ್ಟಣ, ಬಿಸ್ಕತ್ ಕವರ್, ನೀರಿನ ಬಾಟಲ್, ಜ್ಯುಸ್ ಬಾಟಲ್ ಗಳನ್ನು ರಸ್ತೆಯ ಇಕ್ಕೆಲೆಗಳಲ್ಲಿ, ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆಯಲ್ಲದೇ, ಸ್ವಚ್ಛತೆಗೂ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ಲಾಸ್ಟಿಕ್ ಮುಕ್ತ ಮಾಡಲು ಇಂದಿನಿಂದ ಕಟ್ಟು ನಿಟ್ಟಿನ ನಿಯಮ ಜಾರಿ ಮಾಡಿದ್ದಾರೆ.
ಪ್ಲಾಸ್ಟಿಕ್ ಬಿಸಾಕಿದರೆ 500 ರೂಪಾಯಿ ದಂಡ. ಮೊದಲ ಬಾರಿ ತ್ಯಾಜ್ಯ ಬಿಸಾಗಿದರೆ 2,500 ರೂಪಾಯಿ ದಂಡ, 2ನೇ ಬಾರಿ ಬಿಸಾಕಿದರೆ 5000 ರೂ ದಂಡ ಮೂರನೆ ಬಾರಿ ಬಿಸಾಕಿದರೆ 10,000 ರೂಪಾಯಿ ದಂಡ ಹಾಗೂ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಚಾಮುಂಡಿ ಬೆಟ್ಟದ ಅಂಗಡಿಯವರಿಗೂ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ನಿರ್ಬಂದಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದರೆ 1 ಸಾವಿರ ದಂಡ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧ. ಮದ್ಯ, ಹಾನಿಕಾರಕ ವಸ್ತು ಸಾಗಿಸಿದರೆ 5 ಸಾವಿರ ದಂಡ. ಕಾಡುಪ್ರಾಣಿಗಳಿಗೆ ಆಹಾರ ನೀಡಿದರೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿದೆ.