ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವ, ಜಂಬೂಸವಾರಿ ಸಮೀಪಿಸುತ್ತಿರುವ ಬೆನ್ನಲ್ಲೇ ಚಾಮುಂಡಿ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇನ್ಮುಂದೆ ಚಾಮುಂಡಿ ಬೆಟ್ಟದಲ್ಲಿ ಕಸ ಬಿಸಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಭಾರಿ ದಂಡ ವಿಧಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣಾ ಪ್ರಧಿಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಬೆಟ್ಟದಲ್ಲಿ ಪ್ಲಾಸ್ಟಿಕ್ ಬಿಸಾಕಿದರೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ. ಚಾಮುಂಡಿ ಬೆಟ್ಟದಲ್ಲಿರುವ ಅಂಗಡಿಗಳಿಗೂ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಮೊದಲ ಬಾರಿಗೆ ತ್ಯಾಜ್ಯ ಬಿಸಾಕಿದರೆ 2,500 ರೂಪಾಯಿ ದಂಡ, ಎರಡನೇ ಬಾರಿ ತ್ಯಾಜ್ಯ ಬಿಸಾಕಿದರೆ 5000 ರೂಪಾಯಿ ದಂಡ ಹಾಗೂ ಮೂರನೇ ಬಾರಿ ಕಸ ಬಿಸಾಕಿದರೆ 10,000 ರೂಪಾಯಿ ದಂಡ ಹಾಗೂ ಲೈಸನ್ಸ್ ರದ್ದು ಮಾಡಲಾಗುತ್ತದೆ.
ಅರಣ್ಯದ ಒಳಗೆ ತೆರಳಿದರೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ. ಅಲ್ಲದೇ ನಿರ್ಬಂಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದರೆ 1,000 ರೂಪಾಯಿ ದಂಡ ವಿಧಿಸಲು ಯೋಜನೆ ರೂಪಿಸಲಾಗಿದೆ.
ಸೆಪ್ಟೆಂಬರ್ 1ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.