ಮೈಸೂರು: ಮೈಸೂರು ದಸರಾ ಮಹೋತ್ಸವಕ್ಕೆ ಕೆಲ ದಿನಗಳು ಮಾತ್ರ ಬಾಕಿಯಿದೆ. ಈ ನಡುವೆ ಇಂದು ಚಾಮುಂಡಿ ಬೆಟ್ಟದಲ್ಲಿ ಮಹಿಷ ಸಮಿತಿಯಿಂದ ಮಹಿಷ ಮಂಡಲೋತ್ಸವ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಚಾಮುಂಡಿ ತಾಯಿ ದರ್ಶನಕ್ಕೂ ಅವಕಾಶವಿಲ್ಲ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪೊಲೀಸ್ ಕಟ್ಟೆಚ್ಚರವಹಿಸಲಾಗಿದೆ.
ಮಹಿಷ ದಸರಾ ಆಚರನಾ ಸಮಿತಿ ಇಂದು ಮಹಿಷ ದಸರಾ ಆಚರಣೆ ಮಾಡುತ್ತಿದ್ದು, ಬೆಳಿಗ್ಗೆ 10;30ಕ್ಕೆ ಚಾಮುಂಡಿಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಹಾಗೂ ಪುರಭವನದ ಹೊರ ಆವರಣದಲ್ಲಿ ಮಹಿಷ ಮಂಡಲೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ವೇಳೆ ಯಾವುದೇ ಮೆರವಣಿಗೆ, ಬೈಕ್ ರ್ಯಾಲಿ, ಪಟಾಕಿ ಸಿಡಿಸುವುದು, ಘೋಷಣೆಗಳನ್ನು ಕೂಗುವ ಕೆಲಸ ಮಾಡುವಂತಿಲ್ಲ. 5 ಜನರಿಗಿಂತ ಹೆಚ್ಚು ಜನರು ಗುಂಪುಗೂಡುವಂತಿಲ್ಲ. ಬಹಿರಂಗ ಸಂಭೆ ನಡೆಸುವಂತಿಲ್ಲ. ಯಾವುದೇ ಫ್ಲೆಕ್ಸ್, ಬ್ಯಾನರ್ ಅಳವಡಿಸುವಂತಿಲ್ಲ ಎಂದು ಷರತ್ತು ವಿಧಿಸಲಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಪೊಲೀಸ್ ಹಾಗೂ ಜಿಲ್ಲಾಡಳಿತ ಆದೇಶ ಹೊರಡಿಸಿದೆ.