ಈ ಬಾರಿಯ ಕ್ರಿಕೆಟ್ ವಿಶ್ವಕಪ್ ಭಾರತದ ಆತಿಥ್ಯದಲ್ಲಿ ನಡೆಯುತ್ತಿದ್ದು, ಅಕ್ಟೋಬರ್ ತಿಂಗಳಿನಿಂದ ಪಂದ್ಯಾವಳಿಗಳು ಆರಂಭವಾಗಲಿವೆ. ಇದರ ಮಧ್ಯೆ ಕ್ರಿಕೆಟ್ ಜಗತ್ತು ಅಚ್ಚರಿ ಪಡುವಂತಹ ವಿದ್ಯಮಾನವೊಂದು ನಡೆದಿದ್ದು, ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡ ವಿಶ್ವ ಕಪ್ ಗೆ ಅನರ್ಹಗೊಂಡಿದೆ.
ಶನಿವಾರದಂದು ಹರಾರೆಯಲ್ಲಿ ನಡೆದ ಸೂಪರ್ ಸಿಕ್ಸ್ ಕ್ವಾಲಿಫೈಯರ್ ಪಂದ್ಯದಲ್ಲಿ 7 ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ತಂಡ ಪರಾಭವಗೊಂಡಿದ್ದು, ಹೀಗಾಗಿ ಅರ್ಹತಾ ಸುತ್ತಿನಿಂದ ಹೊರ ಬಿದ್ದಿದೆ. ಆರಂಭಿಕ ಸತತ ಎರಡು ಆವೃತ್ತಿಗಳಲ್ಲಿ ವಿಶ್ವಕಪ್ ಚಾಂಪಿಯನ್ ಪಟ್ಟ ಧರಿಸಿದ್ದ ವೆಸ್ಟ್ ಇಂಡೀಸ್ ತಂಡ ಈಗ ತೀವ್ರ ನಿರಾಸೆಯನ್ನು ಅನುಭವಿಸಿದೆ.
ವಿಶ್ವಕಪ್ ಪಂದ್ಯಾವಳಿಯಿಂದ ವೆಸ್ಟ್ ಇಂಡೀಸ್ ತಂಡ ಹೊರ ಬಿದ್ದಿರುವುದು ಕ್ರಿಕೆಟ್ ಜಗತ್ತಿನಲ್ಲಿ ದಿಗ್ಬ್ರಮೆಯನ್ನುಂಟು ಮಾಡಿದ್ದು, ಒಂದು ಕಾಲದಲ್ಲಿ ಕ್ರಿಕೆಟ್ ಲೋಕದ ಅನಭಿಷಿಕ್ತ ರಾಜನಂತೆ ಮೆರೆಯುತ್ತಿದ್ದ ತಂಡ ಈ ಹಂತ ತಲುಪಲು ಅಲ್ಲಿನ ಕ್ರೀಡಾ ಲೋಕದಲ್ಲಿ ರಾಜಕೀಯ ಬೆರೆತಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. ಭಾರತದ ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.