ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಅವರನ್ನು ಜೆಮ್‌ಶೆಡ್‌ಪುರದ ಟಾಟಾ ಮುಖ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ರಕ್ತದಲ್ಲಿನ ಸಕ್ಕರೆ ಕಡಿಮೆಯಾಗಿ ತಲೆತಿರುಗುವಿಕೆ ಉಂಟಾದ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮಾಜಿ ಸಿಎಂ ಅವರ ಆಪ್ತರು ಹೇಳಿದ್ದಾರೆ.
ಟಾಟಾ ಮುಖ್ಯ ಆಸ್ಪತ್ರೆಯ ಜಿಎಂ ಡಾ. ಸುಧೀರ್ ರೈ ಅವರು ಸೋರೆನ್ ಸ್ಥಿರವಾಗಿದ್ದು, ಅವರ ಸ್ಥಿತಿ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿಯಿಂದ ಹೇಮಂತ್ ಸೊರೆನ್ ಬಂಧನಕ್ಕೊಳಗಾದ ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಫೆಬ್ರವರಿ 2 ರಂದು ಚಂಪೈ ಸೊರೆನ್ ಜಾರ್ಖಂಡ್ ಮುಖ್ಯಮಂತ್ರಿಯಾದರು. ಹೇಮಂತ್ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಜುಲೈನಲ್ಲಿ ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಚಂಪೈ ಅವರು ಹುದ್ದೆ ತ್ಯಜಿಸಿದರು.
ಆಗಸ್ಟ್ 30 ರಂದು ಚಂಪೈ ಸೊರೆನ್ ಅವರು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.