
ಮೈಸೂರು: ಚಾಮರಾಜನಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ತಾರೆ ಎಂಬ ನಂಬಿಕೆ/ಅಪನಂಬಿಕೆ ಬೆಳೆದುಬಂದಿದೆ. ಈ ಕಾರಣಕ್ಕೆ ಚಾಮರಾಜನಗರಕ್ಕೆ ಅನೇಕ ಮುಖ್ಯಮಂತ್ರಿಗಳು ಭೇಟಿ ನೀಡಿಲ್ಲ. ಭೇಟಿ ನೀಡಿದ್ದವರು ಅಧಿಕಾರ ಕಳೆದುಕೊಂಡಿದ್ದಾರೆ. ಈ ನಂಬಿಕೆ, ಅಪನಂಬಿಕೆಗಳ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಚಾಮರಾಜನಗರಕ್ಕೆ ಹೊರಟಿದ್ದಾರೆ.
ಚಾಮರಾಜನಗರಕ್ಕೆ ಮುಖ್ಯಮಂತ್ರಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾನು ಚಾಮರಾಜನಗರಕ್ಕೆ ಭೇಟಿ ಕೊಡುತ್ತೇನೆ ಎಂದು ತಿಳಿಸಿದ್ದಾರೆ.
ನಾಳೆ ಮಾತ್ರವಲ್ಲ, ಇನ್ನೂ ಹಲವು ಬಾರಿ ನಾನು ಅಲ್ಲಿಗೆ ಭೇಟಿ ನೀಡುತ್ತೇನೆ. ಮುಖ್ಯಮಂತ್ರಿಗೆ ಎಲ್ಲ ಜಿಲ್ಲೆಗಳು ಒಂದೇ. ಅಲ್ಲಿಗೆ ಹೋಗದಿದ್ದರೆ ಅಧಿಕಾರ ಉಳಿದಿದೆಯಾ? ನನಗೆ ಬೇರೆಯವರ ರೀತಿ ಯಾವುದೇ ಭಯವಿಲ್ಲ. ಇದು ನಂಬಿಕೆ, ಅಪನಂಬಿಕೆ ಪ್ರಶ್ನೆ ಅಲ್ಲ. ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯದ ಪ್ರಶ್ನೆ. ಆ ಕರ್ತವ್ಯವನ್ನು ನಾನು ಈಗ ಮಾಡುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ.