ಮಂಡ್ಯ: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಕೃಷಿ ಅಧಿಕಾರಿಗಳೇ ತಿರುಗಿಬಿದ್ದಿದ್ದು, ಸಚಿವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದ ವಿಚಾರ ರಾಜ್ಯಾದ್ಯಂತ ಭಾರಿ ಸುದ್ದಿಯಾಗಿದ್ದು, ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.
ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚದ ಆರೋಪ ಮಾಡಿ ಕೆಲ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣದ ತನಿಖೆಗೆ ಫೀಲ್ಡಿಗಿಳಿದಿರುವ ಸಿಐಡಿ ಅಧಿಕಾರಿಗಳು ಇದೀಗ ಪತ್ರದ ಮೂಲ ಪತ್ತೆ ಮಾಡಿದ್ದಾರೆ.
ಸಿಐಡಿ ಐಜಿಪಿ ಪ್ರವೀಣ್ ಮಧುಕರ್ ಪವಾರ್ ನೇತೃತ್ವದ ತಂಡ ಮಂಡ್ಯ ಕೃಷಿ ಜಂಟಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನಿರ್ದೇಶಕ ಅಶೋಕ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ ರಾಜ್ಯಪಾಲರಿಗೆ ಬರೆದಿದ್ದಾರೆ ಎನ್ನಲಾದ ಪತ್ರ ಪೋಸ್ಟ್ ಆಗಿರುವುದು ಮೈಸೂರಿನ ಸರಸ್ವತಿಪುರಂ ಅಂಚೆಕಚೇರಿಯಿಂದ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಸಿಐಡಿ ಅದಿಕಾರಿಗಳು ಮೈಸೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜುಲೈ 14ರಂದು ಸರಸ್ವತಿಪುರಂ ಪೋಸ್ಟ್ ಆಫೀಸ್ ನಿಂದ ಪತ್ರ ರಾಜ್ಯಪಾಲರಿಗೆ ಪೋಸ್ಟ್ ಆಗಿದ್ದು, ಈ ಬಗ್ಗೆ ಮತ್ತಷ್ಟು ದಾಖಲೆಗಳನ್ನು ಒದಗಿಸುವಂತೆ ಪೋಸ್ಟ್ ಆಫೀಸ್ ಸಿಬ್ಬಂದಿಗಳಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ಅಲ್ಲದೇ ಇದು ನಕಲಿ ಪತ್ರವೇ ಅಥವಾ ಅಸಲಿ ಪತ್ರವೇ ಎಂಬ ಬಗ್ಗೆಯೂ ಕೂಲಂಕುಷ ತನಿಖೆ ನಡೆಸಲಾಗುತ್ತಿದೆ.