ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ನಿನ್ನೆ ಕರೆದಿದ್ದ ಸರ್ವಪಕ್ಷ ಸಭೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗೈರಾಗಿದ್ದ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಆಗಿ, ಕೇಂದ್ರ ಸಚಿವರಾಗಿ ಕಾವೇರಿ ನದಿ ನೀರಿನ ವಿಚಾರದ ಚರ್ಚೆಯ ಸಭೆಗೆ ಗೈರಾಗದೇ ಬಾಡೂಟಕ್ಕೆ ತೆರಳಿದ್ದು ದುರಂತ ಎಂದು ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಸರ್ವಪಕ್ಷ ಸಭೆಗೆ ಕುಮಾರಸ್ವಾಮಿ ಬಂದಿಲ್ಲ. ಅವರು ಸಭೆಗೆ ಗೈರಾಗಿ ಬಾಡೂಟಕ್ಕೆ ಹೋಗಿದ್ದು ದುರಂತವಲ್ಲವೇ? ಎಂದು ಪ್ರಶ್ನಿಸಿದರು.
ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಗೆ ಕೇಂದ್ರದ ಯಾವ ಸಚಿವರೂ ಬಂದಿಲ್ಲ. ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಯಾರು ಬಂದಿಲ್ಲ. ರೈತರ ವಿಚಾರ ಬಂದಾಗ ಕನಿಷ್ಠಪಕ್ಷ ಕುಮಾರಸ್ವಾಮಿಯವರು ಬರಬೇಕಿತ್ತು. ಅವರು ಮಾಜಿ ಸಿಎಂ, ದೇಶ ಆಳಿದ ಕುಟುಂಬದವರಾಗಿದ್ದಾರೆ. ಕಾವೇರಿ ವಿಚಾರವಾಗಿ ಮೊದಲು ಆದ್ಯತೆ ನೀಡುತ್ತೇವೆ ಎಂದಿದ್ದರು. ಆದರೆ ಈಗ ಸರ್ವಪಕ್ಷ ಸಭೆಗೆ ಗೈರಾಗಿದ್ದು ಮಂಡ್ಯದ ಜನತೆಗೆ ತೋರಿದ ಅಗೌರವ ಎಂದು ವಾಗ್ದಾಳಿ ನಡೆಸಿದ್ದಾರೆ.