![](https://kannadadunia.com/wp-content/uploads/2025/02/n.chaluvarayaswamy.jpg)
ಮಂಡ್ಯ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತರಲು ಹೊರಟಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕದೇ ಕಳುಹಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಚಲುವರಾಯಸ್ವಾಮಿ, ರಾಜ್ಯಪಾಲರು ಸಂವಿಧಾನಿಕ ಹುದ್ದೆಯಲ್ಲಿದ್ದು ನ್ಯಾಯ ಕೊಡುವ ಕೆಲಸ ಮಾಡಬೇಕಿತ್ತು ಎಂದು ಅಸಮಾಧನ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ನೊಂದು ಹಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ತೊಂದರೆ ತಪ್ಪಿಸಲು ರಾಜ್ಯ ಸರ್ಕಾರ ಕೂಡ ನಿಲುವು ತೆಗೆದುಕೊಂಡಿದೆ. ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತೀರ್ಮಾನ ಕೈಗೊಂಡಿದೆ. ಆದರೆ ರಾಜ್ಯಪಾಲರು ಸುಗ್ರೀವಾಜ್ಞೆಗೆ ಅಂಕಿತ ಹಾಕದೇ ಬಿಜೆಪಿ ವಕ್ತಾರರಂತೆ ನಡೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯಪಾಲರು ಬಿಜೆಪಿ ವಕ್ತಾರರಂತೆ ಕೆಲದ್ಸ ಮಾಡುತ್ತಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿ ನ್ಯಾಯಕೊಡುವ ಕೆಲಸ ಮಾಡಬೇಕು. ಆದರೆ ರಾಜ್ಯಪಾಲರು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು. ಫೈನಾನ್ಸ್ ಕಿರುಕುಳಕ್ಕೆ ನೊಂದವರೆಲ್ಲರೂ ಪ್ರತಿಭಟನೆ ಮಾಡುವ ಕಾಲ ಬರುತ್ತದೆ. ನಿಯಮಾನುಸಾರ ಫೈನಾನ್ಸ್ ನವರು ಸಾಲ ವಸೂಲಿ ಮಾಡಬೇಕು ಆದರೆ ಹಾಗೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ರಾಜಕೀಯ ಪ್ರೇರಿತ. ಆದಾಗ್ಯೂ ರಾಜ್ಯಪಾಲರು ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡಿದರು. ಸರ್ಕಾರ ಜರೈಗೆ ತರಲು ಹೊರಟ ಹಲವಾರು ನಿಯಮಗಳಿಗೆ ಅಂಕಿತ ಹಾಕದೇ ವಿಳಂಬ ಧೋರಣೆ ಅನುಸರಿಸುತಿದ್ದಾರೆ ಎಂದು ಕಿಡಿಕಾರಿದರು.