ಮಂಡ್ಯ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೇಸರಿ ಶಾಲು ಹಾಕಿಕೊಂಡು ಪ್ರತಿಭಟನೆಯಲ್ಲಿ ಭಾಗಿಯಾದ ಕ್ರಮದ ಬಗ್ಗೆ ಸಚಿವ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ರಾಷ್ಟ್ರಧ್ವಜ ವಿಚಾರದಲ್ಲಿ ರಾಜಕೀಯ ಮಾಡಬಾರದು. ನೆಮ್ಮದಿ ಹಾಳು ಮಾಡುವ ಹೆಜ್ಜೆ ಇಟ್ಟಿರುವುದು ನೋವು ತಂದಿದೆ. ಕೆರಗೋಡು ಗ್ರಾಮದ ಯುವಕರೊಂದಿಗೆ ಮಾತನಾಡಿದ್ದೇವೆ. ಕುಮಾರಸ್ವಾಮಿಯವರು ಅನಗತ್ಯವಾಗಿ ಗ್ರಾಮಸ್ಥರ ಭವನೆಗಳನ್ನು ಕೆದಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹೆಚ್.ಡಿ.ಕೆ ಸಿಎಂ ಆಗಲು ಮಂಡ್ಯ ಜಿಲ್ಲೆಯ ಜನರ ಆಶಿರ್ವಾದವಿದೆ. ನೀವು ಮುಖ್ಯಮಂತ್ರಿಯಾಗಲು ಜಿಲ್ಲೆಯ ಜನ ಕಾರಣ ಎಂಬುದನ್ನು ಮರೆತಿದ್ದೀರಾ. ಇಷ್ಟಕ್ಕೂ ಮಂಡ್ಯ ಜಿಲ್ಲೆಗೆ ನಿಮ್ಮ ಶಾಶ್ವತ ಕೊಡುಗೆಯಾದರೂ ಏನು? ಈಗ ರಾಜಕಾರಣಕ್ಕಾಗಿ ಕೇಸರಿ ಶಾಲು ಹಾಕಿಕೊಂಡು ಜಿಲ್ಲೆಯ ಜನರ ನೆಮ್ಮದಿ ಹಾಳು ಮಾಡಲು ಹೊರಟಿದ್ದೀರಾ ಎಂದು ಕಿಡಿಕಾರಿದರು.
ಕಾವೇರಿ ನೀರಿನ ಸಮಸ್ಯೆ, ಶುಗರ್ ಪ್ಯಾಕ್ಟರಿ ಸಮಸ್ಯೆಯೇ ಇನ್ನೂ ಬಗೆಹರಿದಿಲ್ಲ. ಈಗ ಹೊಸ ವಿಚಾರ ತೆಗೆದು ಜಿಲ್ಲೆಯಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.